Breaking News

ಮಂಗಳೂರು: ವಾರಪೂರ್ತಿ ರಜೆ ಪಠ್ಯ ಸರಿದೂಗಿಸಲು ಸಾರ್ವತ್ರಿಕ ರಜೆಗೆ ಕತ್ತರಿ -ಡಿಸಿ ಸೂಚನೆ

ಮಂಗಳೂರು : ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಶಾಲಾ ಕಾಲೇಜುಗಳಿಗೆ ನೀಡಲಾಗಿರುವ ರಜೆ ಅವಧಿಯಲ್ಲಿ ನಿರ್ವಹಿಸಬೇಕಾದ ಪಠ್ಯಗಳನ್ನು ಇತರ ಸಾರ್ವತ್ರಿಕ ರಜಾದಿನಗಳಂದು ಸರಿದೂಗಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಮಂಗಳವಾರದಿಂದ ವಿಪರೀತ ಮಳೆ ಸುರಿಯುತ್ತಿದ್ದು, ನಿರಂತರವಾಗಿ ರೆಡ್ ಅಲರ್ಟ್ ಘೋಷಣೆಯಾಗುತ್ತಿದೆ. ಅಲ್ಲದೆ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಸ್ತೆ, ಮನೆಗಳಿಗೆ ನೀರು ನುಗ್ಗುತ್ತಿದೆ. ಜಿಲ್ಲೆಯ ಕೆಲವೆಡೆ ಭೂಕುಸಿತದಂತಹ ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ, ಪದವಿ ಕಾಲೇಜು, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಐಟಿಐ ಸೇರಿದಂತೆ ಸರ್ಕಾರಿ, ಅನುದಾನಿತ, ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಸಾರಲಾಗಿದ್ದು, ಶನಿವಾರವೂ ರಜೆ ಮುಂದುವರಿಯಲಿದೆ. ಆದರೆ ಈ ಅವಧಿಯಲ್ಲಿ ನಿರ್ವಹಿಸಬೇಕಾದ ಪಠ್ಯಗಳಿಗೆ ರಜೆಯಿಂದಾಗಿ ಸಮಸ್ಯೆಯಾಗಲಿದ್ದು, ಶೈಕ್ಷಣಿಕ ವರ್ಷದ ಪಠ್ಯಕ್ರಮದ ಮೇಲೂ ಪರಿಣಾಮ ಬೀರಲಿದೆ. ಈ ಅಂಶವನ್ನು ಗಮನದಲ್ಲಿಟ್ಟು ಮಳೆಗಾಗಿ ನೀಡಿದ ರಜೆಯ ಅವಧಿಯಲ್ಲಿ ನಿರ್ವಹಿಸಬೇಕಾದ ಪಠ್ಯಗಳನ್ನು ಇತರ ಸಾರ್ವತ್ರಿಕ ರಜೆಗಳಂದು ಸರಿದೂಗಿಸಬೇಕು ಎಂದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿದ್ದಾರೆ.

ವಾರವಿಡೀ ರಜೆ ಇದೇ ಮೊದಲು
ಆರ್ದ್ರಾ ಮಳೆಯ ಅಬ್ಬರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಹೈರಾಣಾಗಿಸಿದೆ. ಹೀಗಾಗಿ ಎರಡೂ ಜಿಲ್ಲೆಗಳಲ್ಲಿ ಕಳೆದ ನಾಲ್ಕು ದಿನಗಳಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಸೋಮವಾರ ಹೊರತುಪಡಿಸಿದರೆ ಈ ವಾರದ ಉಳಿದ ಎಲ್ಲಾ ದಿನಗಳಂದು ಶಾಲೆ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಇನ್ನು ಮುಂದಿನ ಸೋಮವಾರದಿಂದ ಪುನಃ ತರಗತಿಗಳು ಆರಂಭವಾಗಲಿವೆ. ಉಭಯ ಜಿಲ್ಲೆಗಳಲ್ಲಿ ಮಳೆಗಾಗಿ ಒಂದೆರಡು ದಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಿದ ಉದಾಹರಣೆ ಇದೆ. ಆದರೆ ವಾರಪೂರ್ತಿ ರಜೆ ನೀಡಿರುವುದು ಇದೇ ಮೊದಲು.

ಜಿಲ್ಲೆಯಲ್ಲಿ ಮಳೆಯ ಅಬ್ಬರ ಇಂದೂ ಮುಂದುವರಿದಿದೆ. ಇಂದು ಮತ್ತು ನಾಳೆ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×