ಮುಂಬೈ: ಕೊರೋನಾ ಲಾಕ್ ಡೌನ್ ಸಡಿಲಿಕೆ ಬಳಿಕ ಒಂದೊಂದೆ ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಜನಜೀವನ ಸಹ ಎಂದಿನಂತೆ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಇದೇ ವರ್ಷ ಐಪಿಎಲ್ ಆಯೋಜನೆ ಮಾಡಿ ತೀರುತ್ತೇವೆಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪಟ್ಟು ಹಿಡಿದಿದೆ.
ಅಕ್ಟೋಬರ್ ನಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಬೇಕಿತ್ತು. ಆದರೆ ಐಸಿಸಿ ಇಲ್ಲಿಯವರೆಗೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಅಲ್ಲದೆ ಪ್ರತಿ ಬಾರಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಲ್ಲೂ ಚರ್ಚೆಗಳಾಗುತ್ತಿವೆ ಹೊರತು ಐಸಿಸಿ ಅಧಿಕಾರಿಗಳು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಹೀಗಿರುವಾಗ ಐಪಿಎಲ್ 13ನೇ ಆವೃತ್ತಿಯನ್ನು ಖಾಲಿ ಮೈದಾನದಲ್ಲಿ ಇದೇ ವರ್ಷ ನಡೆಸಲು ಚಿಂತನೆ ನಡೆಸಿದೆ. ಖಾಲಿ ಮೈದಾನದಲ್ಲಿ ಐಪಿಎಲ್ ನಡೆಸಲು ಯೋಜಿಸಲಾಗುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಇನ್ನು ಸೌರವ್ ಗಂಗೂಲಿ ಅವರು ರಾಜ್ಯ ಅಸೋಸಿಯೇಶನ್ ಗಳಿಗೆ ಕಳುಹಿಸಿರುವ ಪತ್ರದಲ್ಲಿ ಐಪಿಎಲ್ ಭವಿಷ್ಯದ ಬಗ್ಗೆ ಬಿಸಿಸಿಐ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಿದೆ. ಆದಾಯ ವಿಚಾರದಲ್ಲಿ ಐಪಿಎಲ್ ನಿರ್ಣಾಯಕವಾಗಿರುವುದರಿಂದ ಈ ವರ್ಷದ ಐಪಿಎಲ್ ಅನ್ನು ಖಾಲಿ ಮೈದಾನದಲ್ಲಿ ಆಯೋಜಿಸಲು ಯೋಜಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Follow us on Social media