ನವದೆಹಲಿ: ಬೆಳ್ಳಗಿರೋದೆಲ್ಲಾ ಹಾಲಲ್ಲ ಅನ್ನೋ ಕಾಲ ಇದು. ದೇಶದ ಜನರ ಬಳಿ ಇರೋ ಗರಿಗರಿ ನೋಟುಗಳೆಲ್ಲಾ ಒರಿಜಿನಲಾ ಅಂತ ಚೆಕ್ ಮಾಡಿಕೊಳ್ಳುವ ಅಗತ್ಯವಿದೆ. ಯಾಕಂದ್ರೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಇಂತಹದೊಂದು ಮಹತ್ವದ ಎಚ್ಚರಿಕೆಯನ್ನ ನೀಡಿದೆ.
MHAಗೆ ದೇಶಾದ್ಯಂತ 500 ರೂಪಾಯಿ ಮುಖ ಬೆಲೆಯ ನಕಲಿ ನೋಟುಗಳು ಚಲಾವಣೆಯಲ್ಲಿದೆ ಅನ್ನೋ ಗುಪ್ತಚರ ಸುಳಿವು ಸಿಕ್ಕಿದೆ. ಹೀಗಾಗಿ ಸೂಕ್ಷ್ಮವಾಗಿ 500 ರೂ. ನೋಟುಗಳನ್ನ ಪರಿಶೀಲನೆ ಮಾಡುವಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದೆ.
ದೇಶದಲ್ಲಿ ಹಣಕಾಸು ವ್ಯವಹಾರಗಳನ್ನ ಮುನ್ನೆಡೆಸುವ ಫೈನಾನ್ಸ್, ಬ್ಯಾಂಕ್ ಮತ್ತು ಜಾರಿ ಸಂಸ್ಥೆಗಳಿಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಅಲರ್ಟ್ ನೀಡಿದೆ. ಗುಪ್ತಚರ ಮಾಹಿತಿಯ ಪ್ರಕಾರ ದೇಶಾದ್ಯಂತ ಸದ್ಯ ಉತ್ತಮ ಗುಣಮಟ್ಟದ ನಕಲಿ ನೋಟುಗಳು ಚಲಾವಣೆಯಲ್ಲಿದೆ. ನಕಲಿ ನೋಟು ಅಸಲಿ ನೋಟುಗಳ ಗುಣಮಟ್ಟದಲ್ಲೇ ಚಲಾವಣೆಯಲ್ಲಿದೆ. ಹೀಗಾಗಿ RBI ನೀಡಿರುವ ಸೂಚನೆಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (MHA) ಅಸಲಿ ಮತ್ತು ನಕಲಿ ನೋಟುಗಳನ್ನ ಕಂಡು ಹಿಡಿಯೋದು ಹೇಗೆ ಅನ್ನೋದರ ಬಗ್ಗೆಯೂ ತಿಳಿಸಿದೆ. RBI ತನ್ನ ಅಸಲಿ ನೋಟುಗಳಲ್ಲಿ ‘RESERVE BANK OF INDIA’ ಎಂದು ಮುದ್ರಿಸಲಾಗುತ್ತದೆ. ಆದರೆ ಅದೇ ರೀತಿಯ ನಕಲಿ ನೋಟುಗಳಲ್ಲಿ ‘A’ ಅನ್ನೋ ಅಕ್ಷರದ ಜಾಗದಲ್ಲಿ ‘E’ ಮುದ್ರಿಸಲಾಗಿದೆ. ಇದೊಂದು ಸಣ್ಣ ವ್ಯತ್ಯಾಸದಿಂದ ನಕಲಿ ನೋಟುಗಳನ್ನು ಸುಲಭವಾಗಿ ಗುರುತಿಸಬಹುದು ಅನ್ನೋ ಮಾಹಿತಿ ನೀಡಲಾಗಿದೆ.
Follow us on Social media