ತಾಳಿ ಕಟ್ಟುವ ವೇಳೆ ವಧು ನನಗೆ ಮದುವೆ ಬೇಡ ಎಂದು ಹೇಳುವುದನ್ನು ಸಿನಿಮಾ ಹಾಗೂ ಸೀರಿಯಲ್ನಲ್ಲಿ ನೋಡಿರುತ್ತೇವೆ. ಅದೇ ರೀತಿ ನಿಜ ಜೀವನದಲ್ಲಿ ಕೂಡ ಮದುವೆ ಮಂಟಪದಲ್ಲಿ ಕುಳಿತಿದ್ದ ವಧುವಿಗೆ ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಆಕೆ ನನಗೆ ಮದುವೆ ಬೇಡ ಎಂದು ಹೇಳಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾಳೆ.
ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದ ಮಂಜುನಾಥ್ ಹಾಗೂ ಚಳ್ಳಕೆರೆ ತಾಲೂಕಿನ ತಿಪ್ಪರೆಡ್ಡಿಹಳ್ಳಿಯ ಐಶ್ವರ್ಯಾ ಜೊತೆ ವಿವಾಹ ಫಿಕ್ಸ್ ಆಗಿತ್ತು. ಆದರೆ ಗುರುವಾರ ಬೆಳಗ್ಗೆ ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆಯ ಮುಹೂರ್ತ ನಡೆಯುವ ವೇಳೆ ವರನಿಗೆ ವಧು ಶಾಕ್ ನೀಡಿದ್ದಾಳೆ. ವರ ತಾಳಿಕಟ್ಟುವ ವೇಳೆ ಮಂಜುನಾಥ್ ನನಗೆ ಇಷ್ಟ ಇಲ್ಲವೆಂದು ಹೇಳಿದ್ದಾಳೆ. ಯುವತಿ ನಡೆಗೆ ಯುವಕನ ಸಂಬಂಧಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಆಗ ಯುವತಿ ಮನೆಯವರು ಹಾಗೂ ಯುವಕನ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದೆ.
ಈ ವೇಳೆ ಎರಡು ಕಡೆಯ ಸಂಬಂಧಿಗಳು ವಧುವಿನ ಮನವೊಲಿಸಲು ಯತ್ನಿಸಿದ್ರು ಕೂಡ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮದುವೆ ಮುರಿದುಬಿದ್ದಿದೆ. ಮದುವೆಗೆ ಆಗಮಿಸಿದ ಜನರು, ಸಂಬಂಧಿಗಳು ವಧುಗೆ ಹಿಡಿಶಾಪ ಹಾಕಿದ್ದಾರೆ. ವರನ ಕನಸು ನುಚ್ಚು ನೂರು ಮಾಡಿದಳು. ಮೊದಲೇ ತಿಳಿಸಿದ್ರೆ ಸಮಸ್ಯೆ ಎದುರಾಗ್ತಿರಲಿಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ.ಮದುವೆ ನಿರಾಕರಣೆಗೆ ಈವರೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಕುಟುಂಬಸ್ಥರ ಒತ್ತಾಯದ ಮೇರೆಗೆ ಮದುವೆಗೆ ಯುವತಿ ಸಮ್ಮತಿಸಿದ್ದು, ಆಕೆ ತಾಳಿಕಟ್ಟುವ ವೇಳೆ ಧೈರ್ಯ ಮಾಡಿ ವಿವಾಹ ನಿರಾಕರಿಸಿದ್ದಾಳೆಂಬ ಮಾತುಗಳು ಕೇಳಿಬಂದಿವೆ. ಸದ್ಯ ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Follow us on Social media