Breaking News

ರಾಷ್ಟ್ರೀಯ ಶಿಕ್ಷಣ ನೀತಿ 2020: ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಜೊತೆಗೆ ಬೆಳಗಿನ ಉಪಾಹಾರ

ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಜೊತೆಗೆ ಬೆಳಗಿನ ಉಪಾಹಾರವನ್ನು ಕೂಡ ನೀಡಲಾಗುತ್ತದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಈಗಾಗಲೇ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಮಕ್ಕಳಿಗೆ ಬೆಳಗಿನ ಹೊತ್ತು ಪೌಷ್ಟಿಕಯುಕ್ತ ಉಪಾಹಾರ ಸೇವನೆಗೆ ಸಿಕ್ಕಿದರೆ ನಂತರ ಇಡೀ ದಿನ ಮಕ್ಕಳು ಕಲಿಕೆಯಲ್ಲಿ ಏಕಾಗ್ರತೆ ಸಾಧಿಸಲು, ಹೆಚ್ಚು ಚಟುವಟಿಕೆಯಿಂದ ಇರಲು ಸಹಕಾರಿಯಾಗುತ್ತದೆ, ಹೀಗಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಬೆಳಗಿನ ತಿಂಡಿಯನ್ನು ಕೂಡ ಸೇರಿಸಲು ಚಿಂತನೆ ನಡೆಸಲಾಗಿದೆ.

ಶಾಲಾ ಶಿಕ್ಷಣ ವ್ಯವಸ್ಥೆಯೊಳಗೆ ಆರೋಗ್ಯಯುತ ಆಹಾರ, ಉತ್ತಮ ತರಬೇತಿ ಪಡೆದ ಸಾಮಾಜಿಕ ಕಾರ್ಯಕರ್ತರು, ಮಾನಸಿಕ ಸಲಹೆ ತಜ್ಞರು ಮತ್ತು ಸಮುದಾಯಗಳ ಪಾಲ್ಗೊಳ್ಳುವಿಕೆ ಮುಖ್ಯವಾಗುತ್ತದೆ ಎಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹೇಳುತ್ತದೆ.

ಮಧ್ಯಾಹ್ನದ ಬಿಸಿಯೂಟ ಮಾಡಲು ಸಾಧ್ಯವಿಲ್ಲದ ಕಡೆಯಲ್ಲಿ ಮಕ್ಕಳಿಗೆ ಅಲ್ಲಿಯೇ ಪ್ರಕೃತಿಯಲ್ಲಿ ಬೆಳೆದ ಹಣ್ಣುಗಳ ಜೊತೆಗೆ ಕಡಲೆಬೀಜ ಮತ್ತು ನೆಲಗಡಲೆಯನ್ನು ಬೇಯಿಸಿ ಬೆಲ್ಲದ ಜೊತೆ ಮಕ್ಕಳಿಗೆ ನೀಡಬಹುದು, ಇದರಿಂದ ಪೌಷ್ಟಿಕಾಂಶ ಸಿಗುತ್ತದೆ. ಮಕ್ಕಳಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿ ಆರೋಗ್ಯ ಕಾರ್ಡು ನೀಡಬೇಕು, ಮಕ್ಕಳ ಆರೋಗ್ಯವನ್ನು ವೃದ್ಧಿಸುವ ಕೆಲಸಗಳು ಶಾಲೆಯಲ್ಲಿ ಆಗಬೇಕು ಎಂದು ಶಿಕ್ಷಣ ನೀತಿ ಹೇಳುತ್ತದೆ.

ಹೊಸ ಶಿಕ್ಷಣ ನೀತಿ ಏನು ಹೇಳುತ್ತದೆ?: 5 ವರ್ಷದೊಳಗಿನ ಮಗು ಸಿದ್ದತಾ ತರಗತಿ ಅಥವಾ ಬಾಲವಟಿಕಕ್ಕೆ ಹೋಗಬೇಕು, ಮಗುವಿನ ಸರ್ವತೋಮುಖ ಬೆಳವಣಿಗೆಯಾಗುವಂತಹ ಆಟದ ಮೂಲಕ ಪಾಠ ಕಲಿಕೆ ಈ ಹಂತದಲ್ಲಿ ನಡೆಯಲಿದೆ. ಪ್ರಾಥಮಿಕ ಶಾಲೆಗಳಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಸಹ ಮಧ್ಯಾಹ್ನದ ಬಿಸಿಯೂಟ ನೀಡಬೇಕು. ಅಂಗನವಾಡಿಯಲ್ಲಿ ಈಗ ಮಾಡುವ ಆರೋಗ್ಯ ತಪಾಸಣೆ, ಮಕ್ಕಳ ಬೆಳವಣಿಗೆಯ ಗಮನವನ್ನು ಬಾಲವಟಿಕ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಕೂಡ ಮಾಡಬೇಕಾಗುತ್ತದೆ.

ಸದ್ಯ ಮಧ್ಯಾಹ್ನದ ಬಿಸಿಯೂಟ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 8ನೇ ತರಗತಿಯವರೆಗೆ ಮಕ್ಕಳಿಗೆ ನೀಡಲಾಗುತ್ತದೆ. 11.59 ಕೋಟಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸದ್ಯ ಇದರ ಲಾಭ ಪಡೆಯುತ್ತಿದ್ದು 26 ಲಕ್ಷ ಅಡುಗೆ ಕೆಲಸದವರು ಮತ್ತು ಸಹಾಯಕರು ಇದರಿಂದ ಉದ್ಯೋಗ ಪಡೆದುಕೊಂಡಿದ್ದಾರೆ.

1986ರಲ್ಲಿ ರಚಿಸಲ್ಪಟ್ಟಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬದಲಿಸಿ ನೂತನ ಶಿಕ್ಷಣ ನೀತಿ ಜಾರಿಗೆ ಬರುತ್ತಿದ್ದು, ಭಾರತವನ್ನು ಜಾಗತಿಕ ಮಟ್ಟದಲ್ಲಿ ಶಕ್ತಿಶಾಲಿ ದೇಶವನ್ನಾಗಿ ರೂಪಿಸಲು ಶಾಲಾ ಮತ್ತು ಉನ್ನತ ಶಿಕ್ಷಣ ಹಂತದಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಜಾರಿಗೆ ತರುತ್ತಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×