Breaking News

ರಾಜ್ಯಸಭಾ ಚುನಾವಣೆ: ಲಕ್ಷ್ಮಣ್ ಸವದಿ ಟಾರ್ಗೆಟ್, ಕತ್ತಿ ಸಹೋದರರಿಗೆ ಕೈ ಜೋಡಿಸಿದ ಜಾರಕಿಹೊಳಿ ಸಹೋದರರು!

ಬೆಳಗಾವಿ: ಪ್ರಭಾಕರ್ ಕೊರೆ ಅವರಿಗೆ ಮತ್ತೊಂದು ಅವಧಿಗೆ ರಾಜ್ಯಸಭಾ ಟಿಕೆಟ್ ಕೊಡಿಸಲು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಒಲವು ಹೊಂದಿರುವಂತೆಯೇ ಮುಂಬೈ ಕರ್ನಾಟಕದ ಭಾಗದಲ್ಲಿ ಪಕ್ಷದ ಟಿಕೆಟ್ ವಿಚಾರವಾಗಿ ಇದೀಗ ಬಿಜೆಪಿ ಶಾಸಕರ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ.

ಮಾಜಿ ಸಂಸದ ರಮೇಶ್ ಕತ್ತಿ ಅವರಿಗೆ ರಾಜ್ಯಸಭಾ ಟಿಕೆಟ್ ನೀಡುವಂತೆ ಒತ್ತಾಯಿಸಿ ಕತ್ತಿ ಸಹೋದರರು ಮತ್ತು ಹಲವು ಶಾಸಕರು ಪಕ್ಷಕ್ಕೆ ಅಂತಿಮ ಬೇಡಿಕೆ ಸಲ್ಲಿಸಿದ ಮಾರನೇ ದಿನವೇ ಈ ಬೆಳವಣಿಗೆ ನಡೆದಿದೆ.

24 ಕ್ಕೂ ಹೆಚ್ಚು ಪಕ್ಷದ ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿರುವ ಕತ್ತಿ ಸಹೋದರರು, ಪ್ರಭಾಕರ್ ಕೋರೆ ಅವರಿಂದ ತೆರವಾಗಲಿರುವ ರಾಜ್ಯಸಭಾ ಟಿಕೆಟ್ ನ್ನು ತಮಗೆ ನೀಡುವಂತೆ ಮಾಜಿ ಸಂಸದ ರಮೇಶ್ ಕತ್ತಿ ಪಟ್ಟು ಹಿಡಿದಿದ್ದಾರೆ. 

ತಾವೂ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಶಾಸಕರು ಕೋರೆ ಅವರನ್ನು ಮೂರನೇ ಬಾರಿಗೆ ರಾಜ್ಯಸಭೆಗೆ ನೇಮಕ ಮಾಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬಳಿ ಮನವಿ ಮಾಡಿರುವುದಾಗಿ ಶನಿವಾರ ಅಥಣಿಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿಕೆ ನೀಡಿದ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಆದಾಗ್ಯೂ, ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ಕೈಗೊಳ್ಳಲಿದೆ ಎಂದು ಸವದಿ ಹೇಳಿದ್ದಾರೆ. ರಾಜ್ಯಸಭಾ ಸೀಟಿಗಾಗಿ ಲಾಬಿ ಮಾಡುವ ಮೂಲಕ ಬಿಜೆಪಿಯಲ್ಲಿ ನಾಯಕತ್ವವನ್ನು ಗಟ್ಟಿ ಮಾಡಿಕೊಳ್ಳಲು ಸವದಿ ಯತ್ನಿಸುತ್ತಿದ್ದಾರೆ. ಈ ವೇಳೆ ಕತ್ತಿ ಸಹೋದರರನ್ನು ನಿರ್ಲಕ್ಷಿಸಿದರೆ ಪಕ್ಷಕ್ಕೆ ಸ್ವಲ್ಪ ಹಾನಿಯಾಗುವ ಸಾಧ್ಯತೆಯೂ ಇದೆ.

ಲಕ್ಷ್ಮಣ್ ಸವದಿ ನೇರವಾಗಿ ಗೆದ್ದು ಉಪಮುಖ್ಯಮಂತ್ರಿಯಾಗಿಲ್ಲ ಎಂಬ ಬಗ್ಗೆ ಅನೇಕ ಬಿಜೆಪಿ ನಾಯಕರಿಗೆ ಅಸಮಾಧಾನವಿದೆ. ಬೆಳಗಾವಿ ಜಿಲ್ಲೆಯಲ್ಲಿ ಸವದಿ ರಾಜಕೀಯವನ್ನು ದುರ್ಬಲಗೊಳಿಸಲು ಕಾಯುತ್ತಿದ್ದ ಜಾರಕಿಹೊಳಿ ಸಹೋದರರಿಗೆ ಇದೀಗ ಹೊಸ ಅವಕಾಶ ದೊರೆತಂತಾಗಿದೆ. ಮುಂದಿನ ತಿಂಗಳು ನಡೆಯಲಿರುವ ಬೆಳಗಾವಿ ಜಿಲ್ಲಾ ಸೆಂಟ್ರಲ್ ಕ್ರೆಡಿಟ್ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಜಾರಕಿಹೊಳಿ ಸಹೋದರರು ಕಟ್ಟಿ ಸಹೋದರರ ಬೆಂಬಲಕ್ಕೆ ನಿಂತಿದ್ದಾರೆ.

ರಾಜ್ಯಸಭಾ ಸೀಟು ವಿಚಾರವಾಗಿ ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯವನ್ನು ಕಾಂಗ್ರೆಸ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈಗಿನ ಹೋರಾಟ ಉಮೇಶ್ ಕತ್ತಿ ಹೇಗೆ ತಮ್ಮ ಸಹೋದರಿನಿಗೆ ಟಿಕೆಟ್ ಪಡೆದುಕೊಳ್ಳಲಿದ್ದಾರೆ ಎಂಬುದರ ಆಧಾರದ ನಿರ್ಧಾರವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

ಕತ್ತಿ ಸಹೋದರರ ಅಂತಿಮ ಬೇಡಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ನಿಂದ ಪಕ್ಷಾಂತರಗೊಂಡು ಬಿಜೆಪಿ ಸೇರಿದವರು ಉನ್ನತ ಸ್ಥಾನದಲ್ಲಿದ್ದಾರೆ. ಪಕ್ಷಕ್ಕೆ ನಿಷ್ಠರಾಗಿರುವವರು ಇದನ್ನು ಸ್ಪಷ್ಟವಾಗಿ ಅಕ್ಷೇಪಿಸುತ್ತಾರೆ ಎಂದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಾಯಕತ್ವದಡಿಯಲ್ಲಿ ರಾಜ್ಯಸರ್ಕಾರ ಸುಭದ್ರ ಹಾಗೂ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸದ ಸುರೇಶ್ ಅಂಗಡಿ ಹೇಳಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×