Breaking News

ಬೆಂಗಳೂರು : ಐಫೋನ್ ತಯಾರಿಕಾ ಕಂಪನಿ ಫಾಕ್ಸ್ ಕಾನ್ ಗೆ ಪೂರ್ತಿ ಭೂಮಿ ಹಸ್ತಾಂತರ- ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು : ಮುಂಚೂಣಿ ಐಫೋನ್ ತಯಾರಿಕಾ ಕಂಪನಿ ಫಾಕ್ಸ್ ಕಾನ್ 2024ರ ಏಪ್ರಿಲ್ 1ರ ವೇಳೆಗೆ ದೇವನಹ ಳ್ಳಿ ಘಟಕದಲ್ಲಿ ಉತ್ಪಾದನೆ ಆರಂಭಿಸುವ ಗುರಿ ಹೊಂದಿದ್ದು, ಇದಕ್ಕೆ ಪೂರಕವಾಗಿ ಜುಲೈ 1ರ ಹೊತ್ತಿಗೆ ಪೂರ್ತಿಯಾಗಿ ಭೂಮಿ ಹಸ್ತಾಂತರಿಸುವುದಾಗಿ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಗುರುವಾರ ಹೇಳಿದರು.

ಜಾರ್ಜ್ ಚು ನೇತೃತ್ವದಲ್ಲಿನ ಫಾಕ್ಸ್ ಕಾನ್ ಕಂಪನಿಯ ಉನ್ನತ ಅಧಿಕಾರಿಗಳ ತಂಡ  ಸೌಜನ್ಯದ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಹೀಗೆ ಹೇಳಿದರು. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಹಾಜರಿದ್ದರು .ಇದರೊಂದಿಗೆ ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರವು 50,000 ಜನರಿಗೆ ಉದ್ಯೋಗ ಒದಗಿಸುವ 13,600 ಕೋಟಿ ರೂಪಾಯಿ ಮೊತ್ತದ ಈ ಯೋಜನೆ ಜಾರಿಗೆ ವೇಗ ನೀಡಿದಂತಾಗಿದೆ.

ದೇವನಹಳ್ಳಿ ಸಾಮಾನ್ಯ ಕೈಗಾರಿಕಾ ಪ್ರದೇಶದಲ್ಲಿ (ಐಟಿಐಆರ್) ಕಾರ್ಯಯೋಜನೆಗಾಗಿ 300 ಎಕರೆ ಗುರುತಿಸಲಾಗಿದೆ. 2024ರ ಏಪ್ರಿಲ್ 1ರ ವೇಳೆಗೆ ಇಲ್ಲಿ ಕಂಪನಿಯು ತಯಾರಿಕೆ ಶುರು ಮಾಡುವ ಗುರಿ ಹಾಕಿಕೊಂಡಿದೆ. ಇದನ್ನು ಗಮನದಲ್ಲಿರಿಸಿಕೊಂಡು ಜುಲೈ 1ಕ್ಕೆ ಮುಂಚೆ ಕಂಪನಿಗೆ ಭೂಮಿ ಹಸ್ತಾಂತರಿಸಲಾಗುವುದು ಎಂದರು.

ಕಂಪನಿಯು ದಿನಕ್ಕೆ 50 ಲಕ್ಷ ಲೀಟರ್ ನೀರು ಬೇಕಾಗುವುದಾಗಿ ತಿಳಿಸಿದೆ.‌ ಇದನ್ನು ಪೂರೈಸುವ ಜೊತೆಗೆ ಗುಣಮಟ್ಟದ ವಿದ್ಯುತ್, ರಸ್ತೆ ಸಂಪರ್ಕ ಇತ್ಯಾದಿ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ಪಾಟೀಲ್ ಸ್ಪಷ್ಟಪಡಿಸಿದರು. ಕಂಪನಿಯ ಸಿಬ್ಬಂದಿಗೆ ಬೇಕಾಗುವ ಕೌಶಲ ವಿವರಗಳನ್ನು ಕೂಡ ಕೇಳಲಾಗಿದೆ. ಅದಕ್ಕೆ ತಕ್ಕಂತೆ ಸರ್ಕಾರದ ವತಿಯಿಂದ ಅರ್ಹರಿಗೆ ಕೌಶಲಗಳ ತರಬೇತಿ ಕೊಟ್ಟು ಮಾನವ ಸಂಪನ್ಮೂಲ ಲಭ್ಯವಾಗಿಸಲು ಒತ್ತು ಕೊಡುವುದಾಗಿಯೂ ಅವರು ತಿಳಿಸಿದರು. 

ತೈವಾನ್ ಮೂಲದ ಮುಂಚೂಣಿ ಕಂಪನಿಯು ಮೂರು ಹಂತಗಳಲ್ಲಿ ಘಟಕ ನಿರ್ಮಾಣ ಪೂರೈಸಿ ಅಂತಿಮವಾಗಿ ಇಲ್ಲಿ ವರ್ಷಕ್ಕೆ 2 ಕೋಟಿ ಮೊಬೈಲ್‌ಗಳನ್ನು ತಯಾರಿಸುವ ಯೋಜನೆ ಹಾಕಿಕೊಂಡಿದೆ‌. ಈಗಾಗಲೇ ಭೂಮಿಗಾಗಿ ನಿಗದಿಗೊಳಿಸಿರುವ ಮೊತ್ತದಲ್ಲಿ ಶೇಕಡ 30ರಷ್ಟನ್ನು (90 ಕೋಟಿ ರೂಪಾಯಿ) ಕಂಪನಿಯು ಕೆ.ಐ.ಎ‌‌.ಡಿ.ಬಿ.ಗೆ ಪಾವತಿಸಿದೆ.

ಇದಕ್ಕೆ ಮುನ್ನ ಜುಬಿಲಿಯಂಟ್ ಫುಡ್ ವರ್ಕ್ಸ್ ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅಮರದೀಪಸಿಂಗ್  ಅಹ್ಲುವಾಲಿಯಾ, ಎಫ್ಐಸಿಸಿಐ ಕರ್ನಾಟಕ ಮಂಡಳದ ಅಧ್ಯಕ್ಷ ಕೆ. ಉಲ್ಲಾಸ್ ಕಾಮತ್, ಕರ್ನಾಟಕ ಮಂಡಳದ ಅಧ್ಯಕ್ಷ ಶಜು ಮಂಗಳಂ, ಸಿಐಐ ಕರ್ನಾಟಕ ಮಂಡಲ ಅಧ್ಯಕ್ಷ ವಿಜಯಕೃಷ್ಣನ್  ವೆಂಕಟೇಶನ್ ಮತ್ತಿತರರು ಸಚಿವರನ್ನು ಭೇಟಿಯಾಗಿದ್ದರು.

ಐಟಿ ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ವಾಣಿಜ್ಯ ‌ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಅವರು ಇದ್ದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×