Breaking News

‘ತಬ್ಲಿಘಿಗಳಿಂದಲೇ ರೋಗ ಎಂಬ ಅಪಪ್ರಚಾರದ ಹಿಂದೆ ಆರ್ ಎಸ್ಎಸ್ ಹುನ್ನಾರ: ದೀಪ ಹಚ್ಚಿ ಚಪ್ಪಾಳೆ ತಟ್ಟುವುದರಿಂದ ಕಾರ್ಮಿಕರ ಹೊಟ್ಟೆ ತುಂಬಲ್ಲ’

ಬೆಂಗಳೂರು : ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಫಲವಾಗಿವೆ‌. ಜನವರಿ 30ರಂದು ಕೇರಳದಲ್ಲಿ ಮೊದಲು ಸೋಂಕು ಪತ್ತೆಯಾಯಿತು. ಎರಡು ತಿಂಗಳಾದ ಮೇಲೆ ಮಾರ್ಚ್ 24ರಂದು ಲಾಕ್ ಡೌನ್ ಘೋಷಿಸಲಾಯಿತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಲಾಕ್ ಡೌನ್ ಗೆ ಮೊದಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಾಕಷ್ಟು ಸಮಯವಿತ್ತು. ಮೊದಲೇ ಅಂತಾರಾಷ್ಟ್ರೀಯ ವಿಮಾನಯಾನ ಹಾಗೂ ದೇಸಿ ವಿಮಾನಯಾನ ಸಂಪೂರ್ಣ ಬಂದ್ ಮಾಡಿದ್ದಿದ್ದರೆ ಈ ರೋಗ ಹರಡುವುದನ್ನು ತಡೆಗಟ್ಟಲು ಸಾಧ್ಯವಿತ್ತು. 

ಆದರೆ ತಮ್ಮ ತಪ್ಪನ್ನು ಮರೆಮಾಚಲು ಕೇಂದ್ರ ಸರ್ಕಾರದವರು ತಬ್ಲಿಘಿಗಳಿಂದ ರೋಗ ಹೆಚ್ಚಾಯಿತು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಆರ್ ಎಸ್ ಎಸ್ ನವರ ಹುನ್ನಾರ. ಅಮೇರಿಕಾ, ಇಟಲಿ, ಸ್ಪೇನ್ ನಲ್ಲಿ ಯಾವ ತಬ್ಲಿಘಿಗಳಿದ್ದರು‌.ಮೇಲಾಗಿ ದೆಹಲಿಯಲ್ಲಿ ತಬ್ಲಿಘಿ ಸಮಾವೇಶ ಮಾಡಲು ಅನುಮತಿ ಕೊಟ್ಟವರು ಕೇಂದ್ರ ಸರ್ಕಾರದವರೇ. ತಬ್ಲಿಘಿಗಳಿಂದಲೇ ರೋಗ ಹರಡಿದೆ ಎಂಬುದು ರಾಜಕೀಯ ಪ್ರೇರಿತ, ಕೋಮುವಾದಿಗಳ ಹುನ್ನಾರ ಎಂದು ಆರೋಪಿಸಿದರು.

ಪೂರ್ವಸಿದ್ಧತೆ ಮಾಡದೆ ಏಕಾಏಕಿ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ವಲಸೆ ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ. ಕರ್ನಾಟಕವೊಂದರಲ್ಲೇ 5.50 ಲಕ್ಷ ಜನ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 60,000 ಜನರಿಗೆ ಮಾತ್ರ ಅನುಮತಿ ನೀಡಿದ್ದಾರೆ. ಮೇಲಾಗಿ ಅವರಿಂದ ಪ್ರಯಾಣ ವೆಚ್ಚ ವಸೂಲಿ ಮಾಡುತ್ತಿರುವುದು
ಸರಿಯಲ್ಲ. ಅವರಿಗೆ ಉಚಿತ ಪ್ರಯಾಣ ಮಾಡಲು ಅವಕಾಶ ಕೊಡಬೇಕು. ಪಿಎಂ ಕೇರ್ ಫಂಡ್ ಗೆ 35,000 ಕೋಟಿ ರೂ.ಹಣ ಹರಿದು ಬಂದಿದೆ. ಕರ್ನಾಟಕದಿಂದಲೇ ಸಿಎಸ್ ಆರ್ ಫಂಡ್ ನಿಂದ 3000 ಕೋಟಿ ರೂ.ಬಂದಿದೆ. ಅದರಲ್ಲಿ ವಲಸೆ ಕಾರ್ಮಿಕರ ಪ್ರಯಾಣ ವೆಚ್ಚ ಭರಿಸಬೇಕೆಂದರು.

ಪ್ರಧಾನಿ ನರೇಂದ್ರ ಮೋದಿಯವರು ದೀಪಹಚ್ಚಿ, ಚಪ್ಪಾಳೆ ತಟ್ಟಿ ಎಂದು ಹೇಳುವ ಬದಲು ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕಿತ್ತು. ಈ ಕಾರ್ಮಿಕರು ಆರ್ಥಿಕತೆಯ ಬೆನ್ನುಮೂಳೆ ಇದ್ದಂತೆ. ಈ ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವೇನಾದರೂ ಪ್ರಯಾಣ, ವೆಚ್ಚ ಭರಿಸದೇ ಹೋದರೆ ಕಾಂಗ್ರೆಸ್ ಪಕ್ಷವೇ ಆ ವೆಚ್ಚ
ಭರಿಸಬೇಕೆಂದು ಸೋನಿಯಾಗಾಂಧಿಯವರು ಪತ್ರ ಬರೆದಿದ್ದಾರೆ ಎಂದರು.

ಸರ್ವ ಪಕ್ಷ ಸಭೆಯಲ್ಲಿ ನಾವು ಕೊಟ್ಟ ಯಾವ ಸಲಹೆಯನ್ನೂ ಸರ್ಕಾರ ಪರಿಗಣಿಸಿಲ್ಲ. ಕೋರೊನಾ ಮತ್ತು ಕಾರ್ಮಿಕರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಮುಂದೆ 16 ಬೇಡಿಕೆಗಳನ್ನು ಇಟ್ಟಿದ್ದೆವು. ಅದಕ್ಕೂ ಯಡಿಯೂರಪ್ಪ ಅವರು ಪರಿಗಣಿಸಿಲ್ಲ. ನಂತರ ಕಾರ್ಮಿಕರ ಕಷ್ಟಗಳ ಬಗ್ಗೆ ಸುದೀರ್ಘ ಪತ್ರ ಬರೆದೆ. ಅದಕ್ಕೂ ಮುಖ್ಯಮಂತ್ರಿ ಸ್ಪಂದಿಸಿಲ್ಲ. ಸರ್ವ
ಪಕ್ಷಗಳ ಸಭೆ ಮಾಡಿ ಮುಖ್ಯಮಂತ್ರಿಗಳ ಮುಂದೆ 24 ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಿದೆವಾದರೂ ಯಡಿಯೂರಪ್ಪ ಕ್ರಮಕೈಗೊಂಡಿಲ್ಲ‌ ಎಂದರು.

ಕಾರ್ಮಿಕ ಇಲಾಖೆ ಹಾಗು ಬಿಬಿಎಂಪಿಯಿಂದ ಆಹಾರ ಕಿಟ್ ವಿತರಿಸಿರುವುದು ಕೇವಲ ಶೇಕಡಾ 10ರಷ್ಟು ಮಾತ್ರ. ಉಳಿದೆಲ್ಲ ಆಹಾರ ಕಿಟ್ ಗಳನ್ನು ವಿವಿಧ ಶಾಸಕರು ಎನ್ ಜಿ ಓ ಗಳಿಗೆ ಹಂಚಿದ್ದರು. ನಾವು ಹಾಗೆ ಮಾಡದೇ ಇದ್ದಿದ್ದರೆ ರಾಜ್ಯಾದ್ಯಂತ ಹಾಹಾಕಾರ ಆಗಿ ಜನ ಹಸಿವಿನಿಂದ ಸಾಯುತ್ತಿದ್ದರು. ಈಗ ಉರಿಯುವುದರ ಮೇಲೆ ಉಪ್ಪು ಹಾಕುವಂತೆ
ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಹೊರಟಿದ್ದಾರೆ. ರೈತರು ಬೆಳೆದ ತರಕಾರಿ, ಆಹಾರ ಧಾನ್ಯಗಳನ್ನು ಯಾರೂ ಖರೀದಿಸುವವರೇ ಇಲ್ಲ‌. ರೈತರು ಸಂಕಷ್ಟದಲ್ಲಿದ್ದಾರೆ. ಆರ್ಥಿಕ ಚಟುವಟಿಕೆ ಕ್ರಿಯಾಶೀಲವಾಗಬೇಕಾದರೆ ಜನರ ಕೈಯಲ್ಲಿ ದುಡ್ಡಿರಬೇಕು. ಕೊಳ್ಳುವ ಶಕ್ತಿ ಇರಬೇಕು ಎಂದರು.

ನಾವು ಒಂದು ಕೋಟಿ ರೂ . ಚೆಕ್ ಕೊಟ್ಟಮೇಲೆ ವಲಸೆ ಕಾರ್ಮಿಕರ ಅಂತರ ಜಿಲ್ಲಾ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟಿದೆ. ಅತ್ಯಲ್ಪ ಪ್ರಮಾಣದಲ್ಲಿ ಕೆಲವೇ ವರ್ಗದ ಜನರಿಗೆ 1240 ಕೋಟಿ ರು.ಗಳ ಪ್ಯಾಕೇಜ್ ಘೋಷಿಸಿದ್ದಾರೆ. ಇದು‌ ಕೂಡ ಯಾರಿಗೂ ಇನ್ನು ತಲುಪಿಲ್ಲ ಎಂದು ಆರೋಪಿಸಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×