Breaking News

ಗುರುವಾರ ವೈದ್ಯಕೀಯ ಉಪಕರಣಗಳ ಖರೀದಿ ಹಗರಣದ ದಾಖಲೆ ಬಹಿರಂಗ: ಡಿಕೆಶಿ ಗುಡುಗು

ಬೆಂಗಳೂರು: ಕೋವಿಡ್-19 ಉಪಕರಣ, ಸಾಮಗ್ರಿಗಳು, ವೆಂಟಿಲೇಟರ್​​ ಖರೀದಿಯಲ್ಲಿ ಅಕ್ರಮ ನಡೆದಿದ್ದು, ವೈದ್ಯಕೀಯ ಉಪಕರಣಗಳ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ನಾವು ಎಲ್ಲಾ ದಾಖಲೆಗಳನ್ನ ಸಂಗ್ರಹಿಸಿದ್ದು, ಗುರುವಾರ ಅವುಗಳನ್ನು ಬಹಿರಂಗಪಡಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಕೊರೋನಾ ನಿಯಂತ್ರಣದಲ್ಲಿ ಸರ್ಕಾರದ ವೈಫಲ್ಯದ ಬಗ್ಗೆ ಹೋರಾಟ ರೂಪಿಸುವ ಬಗ್ಗೆ ಪಕ್ಷದ ಪ್ರಮುಖ ನಾಯಕರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹೆಸರಿನಲ್ಲಿ ಸರ್ಕಾರ ಸಾಕಷ್ಟು ಅವ್ಯವಹಾರ ನಡೆಸಿದೆ. ಈ ನಡುವೆ ಕೊರೋನಾ ಕೇರ್ ಸೆಂಟರ್ ಗಳಿಗೆ ಹಾಸಿಗೆ ಬಾಡಿಗೆ ಪಡೆದಿರುವ ವಿಚಾರದಲ್ಲಿ ಲೆಕ್ಕಕೊಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ತಾವು ಉತ್ತರ ಕೊಡಿ ಎಂದು ಕೇಳಿದ ಬಳಿಕ ಸರ್ಕಾರ ಬಾಡಿಗೆ ಬದಲಾಗಿ ಹಾಸಿಗೆಗಳನ್ನು ಖರೀದಿಸಲು ಆದೇಶ ನೀಡಿದೆ ಎಂದರು.

ಕೋವಿಡ್ ಕೇರ್ ಸೆಂಟರ್ ನಲ್ಲಿ ಕೊರೋನಾ ಸೋಂಕಿತರು ಬಳಸಿರುವ ಹಾಸಿಗೆಗಳನ್ನು ನಂತರ ಸರ್ಕಾರಿ ಹಾಸ್ಟೆಲ್, ಆಸ್ಪತ್ರೆಗಳಿಗೆ ಬಳಸುವುದನ್ನು ವಿರೋಧಿಸಿ ರಾಜ್ಯವ್ಯಾಪಿ ಜನಾಂದೋಲನ ರೂಪಿಸುವುದಾಗಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಕೋವಿಡ್ ಕೇರ್ ಉಸ್ತುವಾರಿ ರಾಜೇಂದ್ರ ಕಠಾರಿಯಾ ಅವರು ಕೇರ್ ಸೆಂಟರ್ ಗಳಲ್ಲಿ ಬಳಸಿರುವ ಹಾಸಿಗೆಗಳನ್ನು ಸ್ಯಾನಿಟೈಸ್ ಮಾಡಿ, ಹಾಸ್ಟೆಲ್ ಗಳಿಗೆ ಬಳಸಿಕೊಳ್ಳಲು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸೋಂಕಿತ ವ್ಯಕ್ತಿಗಳು ಬಳಸಿರುವ ಬೆಡ್ ಗಳನ್ನು ಯಾವುದೇ ಕಾರಣಕ್ಕೂ ಹಾಸ್ಟೆಲ್ ಗಳಿಗೆ ನೀಡಬಾರದು. ರಾಜ್ಯದ ಜನತೆ ಹಾಗೂ ವಿದ್ಯಾರ್ಥಿಗಳು ಈ ಬಗ್ಗೆ ಸರ್ಕಾರದ ನಡೆಯನ್ನು ಖಂಡಿಸಬೇಕು ಎಂದು ಕರೆ ನೀಡಿದರು.

ಕೊರೋನಾದಿಂದ ಮೃತಪಟ್ಟ ವ್ಯಕ್ತಿಗಳ ಶವಗಳನ್ನು ಕುಟುಂಬ ಸದಸ್ಯರು ಪಡೆದುಕೊಂಡು ಶವ ಸಂಸ್ಕಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಮೃತ ದೇಹಗಳನ್ನು ಪಡೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೋರೋನಾ ಸೋಂಕಿತರು ಬಳಸಿದ ಹಾಸಿಗೆಗಳನ್ನು ಮಕ್ಕಳ, ವಿದ್ಯಾರ್ಥಿಗಳಿಗೆ ನೀಡುತ್ತೇವೆ ಎಂದು ಸರ್ಕಾರ ಮೂರ್ಖತನದ ತೀರ್ಮಾನ ಕೈಗೊಳ್ಳಲು ಹೊರಟಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಅವಕಾಶ ನೀಡುವುದಿಲ್ಲ. ಹಾಸಿಗೆಗಳನ್ನು ಬೇಕಿದ್ದರೆ ಸಚಿವರ ಮನೆಗಳಿಗೆ ಬಳಸಿಕೊಳ್ಳಲಿ, ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಮನೆಗಳಿಗೆ ಹಾಕಿಕೊಳ್ಳಿ. ನಿಮ್ಮ ಪಕ್ಷದ ಶಾಸಕರ ಮನೆಗಳಿಗೆ ರವಾನೆ ಮಾಡಿ. ಆದರೆ ಯಾವುದೇ ಕಾರಣಕ್ಕೂ ಸರ್ಕಾರಿ ಹಾಸ್ಟೆಲ್ ಗೆ, ಸರ್ಕಾರಿ ಆಸ್ಪತ್ರೆಗಳಿಗೆ ನೀಡುವುದು ಬೇಡ. ಸರ್ಕಾರದ ಈ ತೀರ್ಮಾನದ ವಿರುದ್ಧ ರಾಜ್ಯದಲ್ಲಿ ಕಾಂಗ್ರೆ ಸ್ ಜನಾಂದೋಲನ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಇಂದಿನ ಸಭೆಯಲ್ಲಿ ಪ್ರಮುಖವಾಗಿ ನಾಲ್ಕೈದು ವಿಚಾರಗಳ ಬಗ್ಗೆ ಚೆರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಜನರು ಕೊರೋನಾ ಸೋಂಕಿನಿಂದ ನರಳುತ್ತಿದ್ದಾರೆ. ಮತ್ತೊಂದೆಡ ಸರ್ಕಾರ ಖರೀದಿ, ಕೋವಿಡ್ ಕೇರ್ ಸೆಂಟರ್ ಗಳ ಹೆಸರಿನಲ್ಲಿ ಕಾಲ ಹರಣ ಮಾಡುತ್ತಿದೆ. ಜವಾಬ್ದಾರಿಯುತ ವಿಪಕ್ಷವಾಗಿ ನಾವು ಜನರ ಸಮಸ್ಯೆಗಳನ್ನು ಕೇಳಬೇಕಾಗಿದೆ. ಸಭೆಗಳನ್ನು ನಡೆಸಬಾರದದೆಂದು ಸರ್ಕಾರದ ಮಾರ್ಗಸೂಚಿ ಇದೆ. ಆದರೂ ನಾವು ಜನಪರವಾಗಿ ಕೆಲಸ ಮಾಡಬೇಕಿದೆ. ಅದಕ್ಕಾಗಿ ರಾಜ್ಯದ ಜನರಿಗೆ ಸರ್ಕಾರದ ನೀತಿ, ನಡೆಗಳನ್ನು ತಿಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಒಂದೆಡರು ದಿನಗಳಲ್ಲಿ ನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರು ಪತ್ರಿಕಾಗೋಷ್ಟಿ ನಡೆಸಿ ಸರ್ಕಾರದ ಎಲ್ಲಾ ವಿಚಾರಗಳನ್ನು ಬಹಿರಂಗಪಡಿಸುತ್ತೇವೆ. ಅಂತೆಯೇ ಎಲ್ಲಾ ಜಿಲ್ಲೆಗಳಿಗೆ ಮಾಜಿ ಸಚಿವರು, ಕೇಂದ್ರ ನಾಯಕರನ್ನು ನಿಯೋಜಿಸಲಾಗಿದೆ. ಅವರು ಜಿಲ್ಲೆಗಳಲ್ಲಿ ಸುದ್ದಿಗೋಷ್ಟಿ ಹಾಗೂ ಪಕ್ಷದ ಸಭೆಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ ಎಂದರು. 

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಅಶೋಕಣ್ಣ, ಶ್ರೀರಾಮುಲು ಅಣ್ಣ, ಸುಧಾಕರಣ್ಣ ಏನು ಬೇಕಾದ್ರೂ ಮಾತನಾಡಲಿ. ಆದರೆ ನಾವು ಜನರ ಜೊತೆ ಇರುವ ಕೆಲಸ ಮಾಡುತ್ತೇವೆ. ಕೋವಿಡ್ ನಲ್ಲಿ ನಡೆದಿರುವ ಅವ್ಯವಹಾರಗಳ ಎಲ್ಲಾ ದಾಖಲೆಗಳನ್ನ ಸಂಗ್ರಹಿಸಿದ್ದೇವೆ. ಅಂತೆಯೇ ಸರ್ಕಾರ ಹೈಕೋರ್ಟ್ ಗೆ ಸಲ್ಲಿಸಿರುವ ದಾಖಲೆಯೂ ತಮ್ಮ ಬಳಿ ಇದೆ. ತಮಿಳುನಾಡು ಸರ್ಕಾರ ಖರೀದಿಸಿರುವ ದಾಖಲೆಗಳನ್ನು ಪಡೆದುಕೊಂಡಿದ್ದೇವೆ. ಜೊತೆಗೆ ಹಲವು ‌ಮಾಹಿತಿಯನ್ನ ನಾವು ಸಂಗ್ರಹಿಸಿದ್ದು ಗುರುವಾರ ಎಲ್ಲದಕ್ಕೂ ಸ್ಪಷ್ಟವಾದ ಉತ್ತರ ನೀಡುತ್ತೇವೆ ಎಂದು ತಿಳಿಸಿದರು. 

ಸಭೆಯ ಬಳಿಕ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೊರೋನಾ ನಿಯಂತ್ರಣಕ್ಕಾಗಿ ಖರ್ಚು ಮಾಡಿರುವ ಲೆಕ್ಕ ಕೊಡಿ ಎಂದರೆ ಹೀಗೆನಾ ಲೆಕ್ಕ ನೀಡುವುದು. ಸಚಿವರು ಬಾಯಿ ಮಾತಿನಲ್ಲಿ ಲೆಕ್ಕ ಕೊಟ್ಟರೆ ನಡೆಯುವುದಿಲ್ಲ. ಏನೇನು ಖರೀದಿ ಮಾಡಲಾಗಿದೆ. ಎಷ್ಟೆಷ್ಟು ಖರ್ಚು ಮಾಡಲಾಗಿದೆ ಎಂಬ ಲೆಕ್ಕವನ್ನುಗಳು ದಾಖಲೆ ಸಮೇತ ಜನರ ಮುಂದಿಡಬೇಕು.. ಬಾಯಿ ಮಾತಲ್ಲಿ ಹೇಳಿದರೆ ಹೇಗೆ? ದಾಖಲೆಗಳನ್ನ ತೋರಿಸಲಿ ಎಂದು ಪ್ರತಿ ಸವಾಲು ಹಾಕಿದ್ದಾರೆ. 

ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ತಮಗೆ ಪತ್ರ ಬರೆದಿದ್ದಾರೆ. ಅವ್ಯವಹಾರ ಸಾಬೀತು ಪಡಿಸಿದರೆ ರಾಜೀನಾಮೆ ನೀಡುವ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ರಾಜೀನಾಮೆ ಕೊಡಬೇಕಿದ್ದರೆ ಅವರು ಇಲ್ಲಿಗೆ ಯಾಕೆ ಬರಬೇಕಿತ್ತು ರಾಜೀನಾಮೆ ಕೊಟ್ಟು ಹೋಗಬೇಕಿತ್ತು ಎಂದು ವ್ಯಂಗ್ಯವಾಡಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×