Breaking News

ಗಾರ್ಮೆಂಟ್ ಕಾರ್ಮಿಕರಿಗೆ ಕೋವಿಡ್ ಗಿಂತ ಹಸಿವಿನದ್ದೇ ದೊಡ್ಡ ಚಿಂತೆ!

ಬೆಂಗಳೂರು:ಕೊರೋನಾವೈರಸ್ ಗಾರ್ಮೆಂಟ್ ಉದ್ಯಮದ ಮೇಲೂ ತೀವ್ರ ರೀತಿಯ ಪರಿಣಾಮ ಬೀರಿದ್ದು,ರಾಜ್ಯದಲ್ಲಿ ಸಾವಿರಾರು ನೌಕರರು ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ದೇಶದ ಗಾರ್ಮೆಂಟ್ ರಾಜಧಾನಿ ಎಂದು ಪ್ರಸಿದ್ಧಿಯಾಗಿರುವ ಬೆಂಗಳೂರು ಒಂದರಲ್ಲಿಯೇ 400ಕ್ಕೂ ಹೆಚ್ಚು ಘಟಕಗಳು ಮುಚ್ಚುವ ಮೂಲಕ ಸಾವಿರಾರು ಮಂದಿಯ ಉದ್ಯೋಗಕ್ಕೆ ಕುತ್ತು ಬಂದಿದೆ. 

ಅತಿದೊಡ್ಡ ಸಿದ್ದ ಉಡುಪು ತಯಾರಿಕಾ ಕಂಪನಿಗಳಾದ ಶಶಿ ಎಕ್ಸ್ ಪೊರ್ಟ್ಸ್, ಅರವಿಂದ್ ಮಿಲ್ಸ್, ಗೋಕಲ್ ದಾಸ್ ಎಕ್ಸ್ ಪೋರ್ಟ್ಸ್, ಮಧುರಾ ಗಾರ್ಮೆಂಟ್ಸ್ ಮತ್ತಿತರ ಕಂಪನಿಗಳ ಘಟಕಗಳು ಇದರಲ್ಲಿ ಸೇರಿವೆ. ರಾಜ್ಯಾದ್ಯಂತ ಮಹಿಳಾ ಕಾರ್ಮಿಕರನ್ನು ಕೆಲಸದಿಂದ ತೆಗೆದಿರುವ ಬಗ್ಗೆ ಈಗಾಗಲೇ 900 ದೂರುಗಳನ್ನು ಸ್ವೀಕರಿಸಿದ್ದೇವೆ. ಉದ್ದೇಶಪೂರ್ವಕವಾಗಿಯೇ ಸಾರಿಗೆ ನೀಡುತ್ತಿಲ್ಲ, ಸಂಬಳದಲ್ಲಿ ಶೇ. 50 ರಷ್ಟು ಕಡಿತ ಮಾಡಲಾಗುತ್ತಿದೆ ಎಂದು ಗಾರ್ಮೆಂಟ್ಸ್ ಮತ್ತು ಟೆಕ್ಸ್ ಟೈಲ್ ವರ್ಕರ್ಸ್ ಯೂನಿಯನ್ ಅಧ್ಯಕ್ಷೆ ಆರ್. ಪ್ರತಿಭಾ ತಿಳಿಸಿದ್ದಾರೆ. 

ಕೊರೋನಾವೈರಸ್ ಪರಿಣಾಮದಿಂದಾಗಿ ಪಾಶ್ಚಿಮಾತ್ಯ ಚಿಲ್ಲರೆ ವ್ಯಾಪಾರಿಗಳು ರಾಜ್ಯದ  ಕಾರ್ಖಾನೆಗಳಿಗೆ ಪ್ರತಿದಿನ ನೀಡುತ್ತಿದ್ದ ಸಾವಿರಾರು ಆರ್ಡರ್ ಗಳು ಇದ್ದಕ್ಕಿದ್ದಂತೆ ನಿಂತುಹೋಗಿದೆ. ಇದರಿಂದಾಗಿ ಕಾರ್ಖಾನೆ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಾವಿರಾರು ಗಾರ್ಮೆಂಟ್ ಕಾರ್ಮಿಕರು ಬದುಕು ದುಸ್ಥರವಾಗಿದೆ. 

ನನ್ನ ಅಂಗವಿಕಲ ಮಗಳು ದಿವ್ಯಾಂಗ ಚೇತನಳಾಗಿದ್ದು, ಆಕೆ ಕೆಲಸ ಮಾಡುವ ಸ್ಥಿತಿಯಲ್ಲಿಲ್ಲ. ಅಳಿಯ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಕುಟುಂಬದ ನಿರ್ವಹಣೆಗಾಗಿ ಮಗಳ ಮಂಗಳಸೂತ್ರವನ್ನು ಅಡ ಇಡಲು ಯೋಚಿದ್ದೇನೆ. ತಿಂಗಳಿಗೆ ಪಡೆಯುತ್ತಿದ್ದ 8 ಸಾವಿರ ಹಾಗೂ ಹೆಚ್ಚುವರಿ ಭತ್ಯೆಯಿಂದ ಕುಟುಂಬ ನಿರ್ವಹಿಸುತ್ತಿದ್ದೆ. ಮುಂದಿನ ತಿಂಗಳಿನಿಂದ ನನ್ನೊಂದಿಗೆ 300 ಮಂದಿಯನ್ನು ಕೆಲಸದಿಂದ ತೆಗೆದುಹಾಕುವುದಾಗಿ ಸೂಚಿಸಲಾಗಿದೆ. ಸದ್ಯದಲ್ಲಿಯೇ ಕೆಲಸ ಕಳೆದುಕೊಳ್ಳಲಿದ್ದೇವೆ ಎಂದು ಶ್ರೀರಂಗಪಟ್ಟಣದ ಗಾರ್ಮೆಂಟ್ ಕಾರ್ಖಾನೆಯ ಉದ್ಯೋಗಿ ಮಮತಾ ಗೌಡ ವಿಷಾದಿಸುತ್ತಾರೆ.

ಅನೇಕ ಯೂನಿಯನ್ ಗಳಿದ್ದು, ನಮ್ಮನ್ನು ರಕ್ಷಿಸುವುದಾಗಿ ಹೇಳುತ್ತಾರೆ. ಆದರೆ, ಯಾವುದೇ ರೀತಿಯಲ್ಲಿ ರಕ್ಷಣೆ ಸಿಗುತ್ತಿಲ್ಲ ಎಂದು ಹಂಗಾಮಿ ಟೈಲರ್ ಆಗಿ ದುಡಿಯುತ್ತಿರುವ ಪೂರ್ಣಿಮಾ ಹೇಳುತ್ತಾರೆ.

ಪಾಶ್ಟಿಮಾತ್ಯ ರಾಷ್ಟ್ರಗಳಿಂದ ಆರ್ಡರ್ ಬಾರದ ಕಾರಣ ನೌಕರರಿಗೆ ವೇತನ ನೀಡಿ ಕಾರ್ಖಾನೆ ನಡೆಸಲು ಆಗುತ್ತಿಲ್ಲ, ಅವರಿಗೆ ವೇತನ ನೀಡದೆ ಹೇಗೆ ದುಡಿಸಿಕೊಳ್ಳಲು ಸಾಧ್ಯ ಎಂದು ದಕ್ಷಿಣ ಭಾರತ ಮಿಲ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಡಾ. ಕೆ. ಸ್ವೆಲ್ವರಾಜ್ ಪರಿಸ್ಥಿತಿ ಕುರಿತು ವಿವರಿಸುತ್ತಾರೆ.

ಮಾರ್ಚ್ 31, 20201ಕ್ಕೆ ಸಾಲ ಮರುಪಾವತಿಗೆ ನಿಗದಿಪಡಿಸಲಾಗಿರುವ ಗಡುವನ್ನು ವಿಸ್ತರಿಸಲು ಕ್ರಮ ಕೈಗೊಳ್ಳುವಂತೆ ಭಾರತೀಯ ಜವಳಿ ಉದ್ಯಮದ ಒಕ್ಕೂಟವು ಭಾರತೀಯ ಬ್ಯಾಂಕುಗಳ ಸಂಘಕ್ಕೆ ಪತ್ರ ಬರೆದು ಒತ್ತಾಯಿಸಿದೆ. ನೆರವಿಗಾಗಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕೊಂಡೊಯ್ಯಲು  ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ಮುನ್ನಡೆ ಚಿಂತನೆ ನಡೆಸಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×