Breaking News

ಕೊರೋನಾ ಹೊಸ ರೂಪಾಂತರಿ: ರಾಜ್ಯದಲ್ಲಿ ಕಠಿಣ ನಿಯಮ, ಗಡಿಗಳಲ್ಲಿ ಹೈ ಅಲರ್ಟ್, ಏರ್ ಪೋರ್ಟ್ ನಲ್ಲಿ ಬಿಗಿ ಕ್ರಮ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ಧಾರವಾಡದ ಎಸ್ ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಕೊರೋನಾ ಕ್ಲಸ್ಟರ್ ರೂಪದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವುದರಿಂದ ಹೆಚ್ಚಿನ ಎಚ್ಚರಿಕೆಯ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಮೆಡಿಕಲ್ ಕಾಲೇಜಿನ ಹಾಸ್ಟೆಲ್, ಕಾಲೇಜು ಸುತ್ತಮುತ್ತ ಕಂಟೈನ್ ಮೆಂಟ್ ವಲಯವನ್ನಾಗಿ ಮಾಡಿ ಅಲ್ಲಿ ಎಲ್ಲರಿಗೂ ಟೆಸ್ಟ್ ಮಾಡಿ ನಿರ್ಬಂಧ ಹೇರಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಸ್ ಡಿಎಂ ಕಾಲೇಜಿನ ವೈದ್ಯರು, ನರ್ಸ್ ಗಳು, ರೋಗಿಗಳನ್ನು ಕೂಡ ಪರೀಕ್ಷೆಗೊಳಪಡಿಸುತ್ತಿದ್ದೇವೆ. ಹೊರರೋಗಿ ವಿಭಾಗ(OPD)ವನ್ನು ಸಂಪೂರ್ಣವಾಗಿ ಸದ್ಯ ನಿಲ್ಲಿಸಲಾಗಿದೆ. ಅದೇ ರೀತಿ ಮೈಸೂರಿನಲ್ಲಿ ಕೂಡ ಕಂಟೈನ್ ಮೆಂಟ್ ಝೋನ್ ಮಾಡಿ ಕ್ರಮವನ್ನು ತೆಗೆದುಕೊಂಡಿದ್ದೇವೆ. ತೀವ್ರ ನಿಗಾದಲ್ಲಿರಿಸಿ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಕೊರೋನಾ ಪಾಸಿಟಿವ್ ಬಂದವರಿಗೆ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ ಎಂದರು.

ಗಡಿಯಲ್ಲಿ ಹೇಗೆ ಕಟ್ಟೆಚ್ಚರ?: ಕೇರಳದಿಂದ ಬಂದವರಿಂದ ಕೊರೋನಾ ಪಾಸಿಟಿವ್ ಬಂದಿದೆ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದ್ದು, ಕ್ಲಸ್ಟರ್ ಆಗಿರುವ ಕಡೆಯಲ್ಲಿ ಕೇರಳದಿಂದ ಬಂದಿರುವ ಪಾರಾಮೆಡಿಕಲ್ ಸಿಬ್ಬಂದಿಗಳು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಮಡಿಕೇರಿ, ಚಾಮರಾಜನಗರ, ಮೈಸೂರುಗಳಲ್ಲಿ ಕೇರಳ ಗಡಿಭಾಗಗಳಲ್ಲಿ ಸಂಪೂರ್ಣವಾಗಿ ಎಚ್ಚರಿಕೆ ವಹಿಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು, ಕಡ್ಡಾಯವಾಗಿ ಕೊರೋನಾ ಟೆಸ್ಟ್ ಮಾಡಿ ನೆಗೆಟಿವ್ ಇದ್ದರೆ ಮಾತ್ರ ಬಿಡಬೇಕೆಂದು, ಕೊರೋನಾ ಲಸಿಕೆಯ ಎರಡೂ ಡೋಸ್ ಗಳಾಗಿರಬೇಕೆಂದು, ಹಾಗೂ ಹಗಲು-ರಾತ್ರಿ ನಿಗಾ ಇರಿಸಲು, ಟೆಸ್ಟ್ ಗಳನ್ನು ಹೆಚ್ಚಿಸಲು ಸೂಚನೆಯನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ರಾಜ್ಯದ ಗಡಿಜಿಲ್ಲೆಗಳಲ್ಲಿ ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸುವುದು, ವಿಶೇಷವಾಗಿ ಕೇರಳದಿಂದ 16 ದಿನಗಳಿಂದೇಚೆಗೆ ಬರುವವರನ್ನು ಕಡ್ಡಾಯವಾಗಿ ಮತ್ತೊಮ್ಮೆ ಪರೀಕ್ಷೆಗೊಳಪಡಿಸಲಾಗುತ್ತದೆ. 

ಏರ್ ಪೋರ್ಟ್ ಲ್ಲಿ ನಿರ್ಬಂಧ: ವಿಮಾನ ನಿಲ್ದಾಣಗಳು ಸೇರಿದಂತೆ ಕೆಲವು ಕಡೆಗಳಲ್ಲಿ ಕೊರೋನಾ ತಡೆಗೆ ತೀವ್ರ ನಿರ್ಬಂಧಗಳನ್ನು ಹಾಕಲಾಗಿದೆ. ಕೊರೋನಾ ಹೊಸತಳಿ ಓಮಿಕ್ರಾನ್ ಕಂಡುಬಂದಿರುವ ದೇಶಗಳಿಂದ ಬಂದವರನ್ನು ವಿಮಾನ ನಿಲ್ದಾಣಗಳಲ್ಲಿ ಶೇಕಡಾ 100ರಷ್ಟು ಟೆಸ್ಟ್ ಗೊಳಪಡಿಸಲಾಗುವುದು. ಟೆಸ್ಟ್ ನಲ್ಲಿ ನೆಗೆಟಿವ್ ಬಂದರೆ ಮಾತ್ರ ವಿಮಾನ ನಿಲ್ದಾಣದಿಂದ ಹೊರಗೆ ಬಿಡಬೇಕು ಎಂದು ಕಟ್ಟುನಿಟ್ಟು ಮಾಡಲಾಗಿದೆ. ಪಾಸಿಟಿವ್ ಬಂದವರನ್ನು ಕಂಟೈನ್ ಮೆಂಚ್ ಝೋನ್ ಗೆ ಬಿಟ್ಟು ಕ್ವಾರಂಟೈನ್ ಗೆ ಒಳಪಡಿಸಲಾಗುತ್ತದೆ ಎಂದರು.

ಆರೋಗ್ಯ ವಲಯ ಕಾರ್ಯಕರ್ತರಿಗೆ ವಿಶೇಷವಾಗಿ ಬೂಸ್ಟರ್ ಡೋಸ್ ಗಳನ್ನು ನೀಡಲು ಅನುಮತಿ ನೀಡಲು ಮತ್ತು ತೀರ್ಮಾನ ತಿಳಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇಡೀ ದೇಶಕ್ಕೆ ಕೇಂದ್ರ ಸರ್ಕಾರ ಇದನ್ನು ಜಾರಿಗೆ ತರಬೇಕಾಗಿದ್ದು, ಕೇಂದ್ರ ಸರ್ಕಾರ ಚಾಲನೆ ನೀಡಿದ ಕೂಡಲೇ ಮಾಡಲಾಗುವುದು, ಕೊರೋನಾ ಹೊಸ ರೂಪಾಂತರಿ ಕಂಡುಬಂದಿರುವ 3 ದೇಶಗಳಿಗೆ ವಿಮಾನ ಹಾರಾಟವನ್ನು ಸದ್ಯಕ್ಕೆ ನಿಷೇಧಿಸಲು ಮನವಿ ಸಲ್ಲಿಸಲಾಗಿದೆ ಎಂದರು.

ಲಸಿಕೆ ಕಾರ್ಯಕ್ರಮ: ಮಾಲ್ ಗಳು, ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು. ಮಾಲ್, ಸರ್ಕಾರಿ ಕಚೇರಿಗಳಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಷನ್ ನೀಡುವಂತಹ ಸಣ್ಣ ಸ್ಥಳವನ್ನು ಕೂಡ ಮಾಡುವಂತಹ ಸೂಚನೆಯನ್ನು ನೀಡಲಾಗಿದೆ ಎಂದರು. 

2022ರ ಹೊಸ ವರ್ಷಾಚರಣೆಗೆ ಇನ್ನೊಂದೇ ತಿಂಗಳು ಬಾಕಿ ಇದ್ದು ಅದಕ್ಕೆ ಯಾವ ರೀತಿ ಸರ್ಕಾರ ನಿಯಮ ತರುತ್ತದೆ ಎಂದು ಕೇಳಿದ್ದಕ್ಕೆ ಮುಂದಿನ ದಿನಗಳಲ್ಲಿ ಕೋವಿಡ್ ಪರಿಸ್ಥಿತಿಗಳನ್ನು ನೋಡಿಕೊಂಡು ಇನ್ನೊಂದು ವಾರ ಕಳೆದು ಮತ್ತೊಂದು ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. 

ಕೋವಿಡ್ 2ನೇ ಅಲೆ ತಗ್ಗಿದ ನಂತರ ನಿರ್ಬಂಧಗಳನ್ನು ಸಡಿಲ ಮಾಡುವ ಸಂದರ್ಭದಲ್ಲಿ ಮತ್ತೆ ಹೊಸ ರೂಪಾಂತರಿ ಕಾಣಿಸಿಕೊಳ್ಳುತ್ತಿರುವುದರಿಂದ ಕೆಲವು ನಿರ್ಬಂಧಗಳನ್ನು ಮುಂದಿನ ದಿನಗಳಲ್ಲಿ ಆಗುವ ಸಾಧ್ಯತೆಯಿದೆ ಎಂದರು. 

ವ್ಯಾಕ್ಸಿನ್ ಕೊರತೆಯಿಲ್ಲ: ನಮ್ಮ ರಾಜ್ಯದಲ್ಲಿ ಈಗ 80 ಲಕ್ಷ ವ್ಯಾಕ್ಸಿನ್ ಗಳಿದ್ದು, ಮೊದಲ ಡೋಸ್ ಶೇಕಡಾ 91ರಷ್ಟಾಗಿದೆ. ಎರಡನೇ ಡೋಸ್ ಗೆ ಗಮನ ನೀಡಲಾಗುತ್ತಿದ್ದು ಡಿಸೆಂಬರ್ ಅಂತ್ಯದ ವೇಳೆಗೆ ಶೇಕಡಾ 70ರಷ್ಟು ತಲುಪುವ ಗುರಿ ಹೊಂದಲಾಗಿದೆ. ಈಗ ಶೇಕಡಾ 58ರಷ್ಟು ವ್ಯಾಕ್ಸಿನೇಷನ್ ತಲುಪಿದೆ. 

ಇಸ್ರೊ ಸಂಸ್ಥೆಯ ಖಾಸಗೀಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇಸ್ರೊ ಒಂದು ಸಂಸ್ಥೆ, ಹೀಗಾಗಿ ಅದನ್ನು ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×