Breaking News

ಕೆಎಸ್‌ಎಫ್‌ಸಿ ಬಡ್ಡಿ ದರ ಶೇ.4 ರಷ್ಟು ಇಳಿಕೆ: ಸಚಿವ ಸಂಪುಟ ಅನುಮೋದನೆ

ಬೆಂಗಳೂರು: ಕರ್ನಾಟಕ ರಾಜ್ಯ ಹಣಕಾಸು ನಿಗಮ – ಕೆ.ಎಸ್.ಎಫ್.ಸಿ ಯಿಂದ ಸಾಲ ಪಡೆದವರ ಬಡ್ಡಿ ದರವನ್ನು ಶೇ 4 ರಷ್ಟು ಇಳಿಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. 

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಬಡ್ಡಿ ದರ ಹೆಚ್ಚಿರುವುದರಿಂದ ಸಾಲ ತೀರಿಸಲು ಸಾಲಗಾರರಿಗೆ ತುಂಬಾ ಕಷ್ಟವಾಗುತ್ತಿದೆ. ಈ ಕುರಿತು ಬಂದಿರುವ ಮನವಿಗಳ ಆಧಾರದ ಮೇಲೆ ಬಡ್ಡಿದರವನ್ನು ಶೇಕಡ 10ರಿಂದ 6ಕ್ಕೆ ಇಳಿಸಲಾಗುವುದು ಎಂದರು. 

ಬೀದರ್ ವೈದ್ಯಕೀಯ ಕಾಲೇಜಿಗೆ 29.87 ಕೋಟಿ ರೂಗಳ ವೆಚ್ಚದಲ್ಲಿ ವೈದ್ಯಕೀಯ ಉಪಕರಣ ಖರೀದಿ, ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವೃಂದ ಮತ್ತು ನೇಮಕಾತಿ ನಿಯಮಗಳ ರಚನೆಗೆ ಅನುಮೋದನೆ ಕೊಡಲಾಗಿದೆ. 

ಕರ್ನಾಟಕ ಭ್ರಷ್ಟಾಚಾರ ನಿಗ್ರಹದಳಕ್ಕೆ ಇದುವರೆಗೂ ಯಾವುದೇ ವೃಂದ ಮತ್ತು ನೇಮಕಾತಿ ನಿಯಮಗಳು ರಚನೆಯಾಗಿರಲಿಲ್ಲವಾದ ಕಾರಣ ನೇಮಕಾತಿ ವಿಳಂಬವಾಗುತ್ತಿತು. ಈಗ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚನೆ ಮಾಡಲಾಗಿದೆ ಎಂದರು. 

ಅದೇ ರೀತಿ ವಿಶೇಷ ಚೇತನ ಅಭಿವೃದ್ಧಿ ನಿಗಮದ ಸಿವಿಲ್ ಸೇವಾ ನಿಯಮಗಳಿಗೆ ತಿದ್ದುಪಡಿ ತರುವ, ಸಣ್ಣ ಸಣ್ಣ ಇಲಾಖೆಗಳಾದ ಸಣ್ಣ ಉಳಿತಾಯ ಯೋಜನಾ ಇಲಾಖೆ, ಪಿಂಚಣಿ ಇಲಾಖೆ ಮತ್ತು ಆಸ್ತಿ ಮತ್ತು ಋಣಬಾರ ಇಲಾಖೆಗಳಲ್ಲಿ ನೌಕರರ ಕೊರತೆ ಇದ್ದು, ತ್ವರಿತ ಗತಿಯಲ್ಲಿ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ಈ ಮೂರು ಇಲಾಖೆಗಳನ್ನು ಆಯುಕ್ತರು ಖಜಾನಾ ಇಲಾಖೆ ಇವರ ವ್ಯಾಪ್ತಿಗೆ ಸೇರಿಸಲು ಅನುಮೋದಿಸಲಾಗಿದೆ. 

ರಾಜ್ಯದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷಿನ್ ಕಂಪನಿಯನ್ನು ಸೆಕ್ಷನ್ 80ರಡಿ ಸ್ಥಾಪಿಸಲು ಅನುಮೋದಿಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಶೇರು ಬಂಡವಾಳ ಶೇಕಡ 49 ಹಾಗೂ ಕೈಗಾರಿಕಾ ಸಂಘಸಂಸ್ಥೆಗಳ ಶೇರು ಬಂಡವಾಳ ಶೇಕಡ 51 ರಷ್ಟಿರುತ್ತದೆ ಎಂದು ಸಚಿವರು ತಿಳಿಸಿದರು. 

ಬಿ.ಬಿ.ಎಂ.ಪಿ ವ್ಯಾಪ್ತಿಗೆ ಸೇರಿದ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾನೂನಿಗೆ ಸಣ್ಣ ತಿದ್ದುಪಡಿ ಮಾಡಿ ಅನುಮೋದನೆ ನೀಡಲಾಗಿದೆ. ಇಲ್ಲಿ ನೊಂದಣಿ ಮತ್ತು ಕುಂದು ಕೊರತೆ ನಿವಾರಣ ಪ್ರಾಧಿಕಾರ ಎಂದು ಇತ್ತು. ಅದರಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಿದ್ದರು. ಅದನ್ನು ಈಗ ಬೆಂಗಳೂರಿನಲ್ಲಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ, ಆಯುಕ್ತರು ಬಿ.ಬಿ.ಎಂ.ಪಿ ಅವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರವನ್ನು ಪುನರ್ ರಚನೆ ಮಾಡಲಾಗುತ್ತಿದೆ. ಬೆಂಗಳೂರಿನ ಹೊರಗಡೆ ಎಲ್ಲಾ ಜಿಲ್ಲಾಧಿಕಾರಿಗಳೇ ಮುಖ್ಯಸ್ಥರಾಗಿರುತ್ತಾರೆ.

ಕಾರವಾರದ ಅಂಕೋಲದಲ್ಲಿ ನೇವಿ ಪ್ರಾಜೆಕ್ಟ್ ಅವರು ವಿಮಾನ ನಿಲ್ದಾಣವನ್ನು ಅವರ ಉಪಯೋಗಕ್ಕಾಗಿ ನಿರ್ಮಾಣ ಮಾಡುತ್ತಿದ್ದು, ಈ ನಿಲ್ದಾಣವನ್ನು ರಾಜ್ಯ ಸರ್ಕಾರದ ಬಳಕೆಗಾಗಿ ಕೋರಿದಾಗ ಅವರಿಂದ ಒಪ್ಪಿಗೆ ದೊರೆತಿದೆ. ಈ ಸಿವಿಲ್ ಎನ್ಕ್ಲೇವ್ಗೆ ರಾಜ್ಯ ಸರ್ಕಾರ ಅನುದಾನ ನೀಡಬೇಕಾಗಿದ್ದು, ಅನುದಾನದ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು. 

ರಾಯಚೂರು ಜಿಲ್ಲೆಯಲ್ಲಿ ಯಮರಸ್ ನಲ್ಲಿ ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ಇಂಡಿಯನ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಐಐಟಿ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಇಲ್ಲಿರುವ ಅತಿಥಿಗೃಹವನ್ನು ನವೀಕರಣ ಮಾಡಿ ಬಳಸಿಕೊಳ್ಳಲು 62 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗುವುದು. ಎರಡು ವರ್ಷಗಳ ಗುತ್ತಿಗೆ ಅವಧಿ ಮುಗಿದ ನಂತರ ಪ್ರಾಂಶುಪಾಲರು, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಅವರಿಗೆ ಹಸ್ತಾಂತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 

ಕರ್ನಾಟಕ ನ್ಯಾಯಾಲಯಗಳ ಶುಲ್ಕವನ್ನು ಇನ್ನು ಮುಂದೆ ಅನ್ ಲೈನ್ ನಲ್ಲಿ ಪಾವತಿಸುವ, ಕರ್ನಾಟಕ ನ್ಯಾಯಲಯಗಳ ಶುಲ್ಕ ಹಾಗೂ ಮರುಪಾವತಿ ಕಾಯ್ದೆ 58 ಕಲಂ 68ಕ್ಕೆ ತಿದ್ದುಪಡಿ ತರಲು ಅನುಮೋದನೆ ಪಡೆಯಲಾಗಿದೆ. ಇನ್ನುಮುಂದೆ ಸ್ಟಾಂಪ್ ಡ್ಯೂಟಿ, ನ್ಯಾಯಾಲಯಗಳ ಶುಲ್ಕ ಪಾವತಿಗಳನ್ನು ಇ-ಪಾವತಿಗಳ ಮೂಲಕವೇ ತುಂಬಲು ಅನುಕೂಲವಾಗಲಿದೆ.

ಕೊಡಗಿನ ಕೋಟೆ ಮತ್ತು ಅರಮನೆಯು ಶಿಥಿಲಾವಸ್ಥೆಯಲ್ಲಿದ್ದು, ಅದನ್ನು 10 ಕೋಟಿ ರೂ ವೆಚ್ಚದಲ್ಲಿ ನವೀಕರಿಸಿ ಅರಮನೆಯನ್ನು ಭಾರತೀಯ ಪುರಾತತ್ವ ಇಲಾಖೆ ವರ್ಗಾವಣೆ ಮಾಡಲಾಗುವುದು ಎಂದು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×