Breaking News

ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆಗಳನ್ನು ಆರಂಭಿಸಲು ಜಿಲ್ಲಾಧಿಕಾರಿಗಳಿಗೆ ಎಸ್. ಸುರೇಶ್ ಕುಮಾರ್ ಸೂಚನೆ

ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಸಿದ್ದತೆಗಳನ್ನು ಪ್ರಾರಂಭಿಸಬೇಕೆಂದು ಅಧಿಕಾರಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದ್ದಾರೆ.

ಸೋಮವಾರ ರಾಜ್ಯದ ಎಲ್ಲ ಜಿಲ್ಲಾ ಶೈಕ್ಷಣಿಕ ಉಪನಿರ್ದೇಶಕರೊಂದಿಗೆ ವಿಡಿಯೊ ಸಂವಾದ ನಡೆಸಿದ ಸಚಿವರು ಸಾಮಾಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಅವಶ್ಯಕವಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆಗಳನ್ನು ನಿರ್ವಹಿಸುವ ಬಗ್ಗೆ ಕೂಡಲೇ ಗಮನ ಹರಿಸಬೇಕೆಂದು ಸೂಚನೆ ನೀಡಿದರು.

ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲೆಗಳನ್ನು ಕೆಂಪು, ಕಿತ್ತಳೆ, ಹಸಿರು ಮತ್ತು ಕಂಟೇನ್ ಮೆಂಟ್ ವಲಯಗಳೆಂದು ಗುರುತಿಸಿರುವ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಕೈಗೊಳ್ಳಬೇಕಿರುವ ಪರೀಕ್ಷಾ ಸಿದ್ಧತೆ ಕುರಿತು ಸಚಿವರು ಜಿಲ್ಲಾ ಅಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಿದರು. 

ಅಧಿಕಾರಿಗಳ ಅಭಿಪ್ರಾಯದಂತೆ ಮಕ್ಕಳು ತಮ್ಮ ಪರೀಕ್ಷಾ ದಿನಾಂಕ ತಿಳಿಯಲು ಉತ್ಸುಕರಾಗಿದ್ದು ಮತ್ತು ತಮ್ಮ ಪರಿಶ್ರಮದ ಆಧಾರದಲ್ಲಿ ಪರೀಕ್ಷಾ ಫಲಿತಾಂಶವನ್ನು ಪಡೆಯಬೇಕೆಂದು ಬಯಸುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಈ ಸೂಚನೆ ನೀಡಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಮಾಸ್ಕ್, ಸ್ಯಾನಿಟೈಜರ್ ಗಳನ್ನು ಒದಗಿಸಿ ಥರ್ಮಲ್ ತಪಾಸಣೆಗೆ ಒಳಪಡಿಸಿ ಪರೀಕ್ಷೆಗೆ ಹಾಜರುಪಡಿಸಲು ಕ್ರಮ ಕೈಗೊಳ್ಳಬೇಕು. ಜ್ವರದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯನ್ನು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು. ಅಗತ್ಯವಾದ ಡೆಸ್ಕ್, ಬೆಂಚ್ ಗಳನ್ನು ಅಸುಪಾಸಿನ ಶಾಲೆಗಳಿಂದ ಸಂಗ್ರಹಿಸಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಪರೀಕ್ಷಾ ವಾತಾವರಣವನ್ನು ಕಲ್ಪಿಸಬೇಕೆಂದು ಸಲಹೆ ನೀಡಿದರು. 

ಶಿಕ್ಷಣ ಇಲಾಖೆ ಚಂದನವಾಹಿನಿಯಲ್ಲಿ ಈಗಾಗಲೇ ಪರೀಕ್ಷಾರ್ಥಿಗಳಿಗೆ ಪುನರ್ಮನನ ತರಗತಿಗಳನ್ನು ನಡೆಸುತ್ತಿದ್ದು, ಈ ವಾರದಿಂದಲೇ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೂ ಪುನರ್ಮನನ ತರಗತಿಗಳನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇಲಾಖೆಯ ಮಕ್ಕಳವಾಣಿ ಯೂ-ಟ್ಯೂಬ್ ಚಾನೆಲ್ ನಲ್ಲಿಯೂ ಸಹ ಪುನರ್ಮನನ ತರಗತಿಗಳು ವಿದ್ಯಾರ್ಥಿಗಳಿಗೆ ಲಭ್ಯವಿದ್ದು, ಎಸ್ಎಸ್ ಎಲ್ ಸಿ ಪರೀಕ್ಷೆ ಕುರಿತು ಮಕ್ಕಳಲ್ಲಿ ಅನುಮಾನಗಳಿದ್ದರೆ ಪರೀಕ್ಷೆ ಇಷ್ಟರಲ್ಲೇ ನಡೆಯಲಿದೆ ಎಂಬ ಕುರಿತು ಮಕ್ಕಳಿಗೆ ಮತ್ತು ಪೋಷಕರಿಗೆ ಮನವರಿಕೆ ಮಾಡಬೇಕೆಂದು ಸಚಿವರು ಡಿಡಿಪಿ ಐಗಳಿಗೆ ಸೂಚಿಸಿದರು.  ವಿಡಿಯೋ ಸಂವಾದ ಸಂದರ್ಭದಲ್ಲಿ ಇಲಾಖೆಯ ಆಯುಕ್ತ ಡಾ. ಕೆ.ಜಿ. ಜಗದೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×