Breaking News

ಉದ್ಯೋಗ ಖಾತ್ರಿ ದಿನಗೂಲಿ 275 ರೂ. ಗೆ ಹೆಚ್ಚಳ: ಸಚಿವ ಕೆ.ಎಸ್. ಈಶ್ವರಪ್ಪ

ಬೆಂಗಳೂರು: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ ರಾಜ್ಯಕ್ಕೆ 5612 ಕಿ.ಮೀ. ರಸ್ತೆ ಕಾಮಗಾರಿ ಹಂಚಿಕೆ ಮಾಡಿದ್ದು, ಇದರಲ್ಲಿ ಮೊದಲ ಹಂತದಲ್ಲಿ 3226 ಕಿ.ಮೀ. ರಸ್ತೆಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕೇಂದ್ರದ ಪಾಲು 1274 ಕೋಟಿ ರೂ. ಮತ್ತು ರಾಜ್ಯದ ಪಾಲು 1455 ಕೋಟಿ ರೂ. ಸೇರಿ 2729 ಕೋಟಿ ರೂ. ಯೋಜನೆ ಜಾರಿಗೆ ಅನುಮೋದನೆ ಸಿಕ್ಕಿದೆ. ಯೋಜನೆ ಅನುಷ್ಟಾನಕ್ಕೆ 1100 ಕೋಟಿ ಹಂಚಿಕೆ ಮಾಡಲಾಗಿದೆ. ಕಾಮಗಾರಿ ಪ್ರಾರಂಭಕ್ಕೆ ಟೆಂಡರ್ ಕರೆಯಲು ಅನುಮೋದನೆ ಸಿಕ್ಕಿದೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಉದ್ಯೋಗ ಖಾತ್ರಿ ಯೋಜನೆ ಅಡಿ ದಿನಗೂಲಿ 275 ರೂ.ಗೆ ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರ ಕೂಲಿಗಾಗಿ 1039 ಕೋಟಿ ರೂ ಮತ್ತು ಸಾಮಗ್ರಿಗಾಗಿ 821 ಕೋಟಿ ರೂ ಸೇರಿ ಒಟ್ಟು 1861 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ತಿಳಿಸಿದರು.

ಕಳೆದ 2019- 2020ರ ಕೂಲಿ ಬಾಕಿ 346 ಕೋಟಿ ರೂ. ಹಣವನ್ನು ಕಾರ್ಮಿಕರ ಖಾತೆಗೆ ಪಾವತಿ ಮಾಡಲಾಗಿದೆ. ಏಪ್ರಿಲ್ ನಲ್ಲಿ 1.76 ಲಕ್ಷ ಕೂಲಿ ಕಾರ್ಮಿಕರು ಕೆಲಸ ಮಾಡಿದ್ದಾರೆ. ಇನ್ನಷ್ಟು ಕಾರ್ಮಿಕರು ಕೆಲಸ ಮಾಡಬೇಕು. ಕೆಲಸ ಮಾಡಿದ 15 ದಿನಗಳಲ್ಲಿ ಬ್ಯಾಂಕ್ ಖಾತೆಗೆ ಕೂಲಿ ಹಣ ಜಮೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ನರೇಗಾ ಅಡಿ ಕೆಲಸ ಮಾಡುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾಬೂನಿನಿಂದ ಆಗಾಗ ಕೈ ತೊಳೆಯಬೇಕು. ಬಿಸಿ ನೀರು ಸೇವನೆ ಮಾಡಬೇಕು. ಜ್ವರ, ಕೆಮ್ಮು ನೆಗಡಿ ಬಂದರೆ ಶೀಘ್ರವೇ ವೈದ್ಯರನ್ನು ಸಂಪರ್ಕ ಮಾಡಬೇಕು ಎಂದರು.

ಮನೆ ಮನೆಗೆ ಗಂಗೆ
ಮನೆ ಮನೆ ಗಂಗೆ ಯೋಜನೆಯಡಿ 64,84,227 ಮನೆಗಳಿಗೆ 2024 ರೊಳಗೆ ಕೊಳಾಯಿ(ನಲ್ಲಿ) ಮೂಲಕ ಕುಡಿಯುವ ನೀರು ಒದಗಿಸಲಾಗುವುದು. ರಾಜ್ಯದಲ್ಲಿ 80,72,422 ಮನೆಗಳಿದ್ದು, ಈಗಾಗಲೇ 15,88,195 ಮನೆಗಳಿಗೆ ಕೊಳಾಯಿ ಸಂಪರ್ಕ ಕಲ್ಪಿಸಲಾಗಿದೆ ಎಂದು ಈಶ್ವರಪ್ಪ ಹೇಳಿದರು.

ಬರ ಪೀಡಿತ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ 49 ಬರ ಪೀಡಿತ ತಾಲೂಕುಗಳಿಗೆ 1 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬರ ಸಮಸ್ಯೆಯಿಲ್ಲದ 127 ತಾಲೂಕಿಗೆ ತಲಾ 50 ಲಕ್ಷ ಬಿಡುಗಡೆ ಮಾಡಲಾಗಿದೆ. ಒಟ್ಟಾರೆಯಾಗಿ 112 .50 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಬರ ಪೀಡಿತವಲ್ಲದ ತಾಲೂಕುಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲು 50 ಕೋಟಿ ರೂ.ಗಳಿಗೆ ಕಂದಾಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ 29.50 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯಕ್ಕೆ ಮೂರು ಪುರಸ್ಕಾರ
ರಾಷ್ಟ್ರೀಯ ಪಂಚಾಯತ್ ರಾಜ್ ದಿನದಂದು ಅತ್ಯುತ್ತಮ ಕೆಲಸ ಮಾಡಿದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದು, ರಾಜ್ಯಕ್ಕೆ ನಾನಾಜೀ ದೇಶಮುಖ್ ರಾಷ್ಟ್ರೀಯ ಗೌರವಗ್ರಾಮ ಸಭಾ ಪುರಸ್ಕಾರ, ನಮ್ಮ ಗ್ರಾಮ ನಮ್ಮ ಯೋಜನೆ ಪ್ರಶಸ್ತಿ ಹಾಗೂ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಪ್ರಶಸ್ತಿ ಗಳು ಲಭಿಸಿವೆ ಎಂದು ಸಚಿವರು ಹೇಳಿದರು.

ನಾನಾಜೀ ದೇಶಮುಖ್ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕನಕಮಜಲು ಗ್ರಾಮ ಪಂಚಾಯತಿ ಗೆ ಸಿಕ್ಕಿದೆ. ನಮ್ಮ ಗ್ರಾಮ ನಮ್ಮ ಯೋಜನೆ ಪ್ರಶಸ್ತಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿ ಗ್ರಾಮ ಪಂಚಾಯತಿಗೆ ದೊರೆತಿದೆ. ಅದೇ ರೀತಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಪ್ರಶಸ್ತಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮ ಪಂಚಾಯತಿ ಗೆ ಲಭಿಸಿದೆ ಎಂದು ಸಚಿವ ಈಶ್ವರಪ್ಪ ಮಾಹಿತಿ ನೀಡಿದರು.

Source : UNI

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×