Breaking News

ಉಡುಪಿ: ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ-ತಾಯಿ, ಮಗು ಆರೋಗ್ಯವಾಗಿರುವ ಬಗ್ಗೆ ಮಾಹಿತಿ

ಉಡುಪಿ : 22 ವರ್ಷದ ಕೋವಿಡ್-19 ಸೋಂಕು ತಗುಲಿದ್ದ ತುಂಬು ಗರ್ಭಿಣಿಯೊಬ್ಬರು ಜೂನ್ 17ರಂದು ಉಡುಪಿಯ ಡಾ. ಟಿ. ಎಂ. ಎ. ಪೈ ಆಸ್ಪತ್ರೆಯಲ್ಲಿ ತುರ್ತು ಸಿಸೇರಿಯನ್ ಹೆರಿಗೆಗೆ ಒಳಗಾಗಿರುವ ಘಟನೆ ನಡೆದಿದೆ.

ಕಾರ್ಕಳ ಮೂಲದ ಮಹಿಳೆಯನ್ನು ಜೂನ್ 16ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ತುರ್ತು ಸಿಸೇರಿಯನ್ ಮಾಡಲಾಗಿದ್ದು, ತಾಯಿ ಚೇತರಿಸಿಕೊಳ್ಳುತ್ತಿದ್ದಾರೆ ಜೊತೆಗೆ ನವಜಾತ ಶಿಶು ಆರೋಗ್ಯವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಪ್ರಸೂತಿ ತೊಂದರೆ ಕಾರಣಗಳಿಂದಾಗಿ ಈ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ರೋಗಿಗೆ ಇದು ಮೊದಲ ಶಸ್ತ್ರಚಿಕಿತ್ಸೆಯಾಗಿದೆ. ಪ್ರಸೂತಿ ಶಸ್ತ್ರಚಿಕಿತ್ಸಕರಾದ ಡಾ. ಶಶಿಕಲಾ ಕೆ ಭಟ್ ಮತ್ತು ಡಾ. ಸುರಭಿ ಸಿನ್ಹಾ ಮತ್ತು ಅರಿವಳಿಕೆ ತಜ್ಞ ಡಾ.ರೋಶನ್ ಶೆಟ್ಟಿ ಅವರ ತಂಡಕ್ಕೆ ಶ್ರೀಮತಿ ವೆರೋನಿಕಾ, ಶ್ರೀಮತಿ ಅಶ್ವಿನಿ ಮತ್ತು ಶ್ರೀಮತಿ ಜಯಶ್ರೀ ಅವರ ಶುಶ್ರೂಷಾ ತಂಡ ಸಹಾಯ ಮಾಡಿತು. ನವಜಾತ ಶಿಶುವಿನ ಆರೈಕೆಯನ್ನು ಡಾ. ಆಶಿಶ್ ಗುಪ್ತಾ ಮತ್ತು ಡಾ.ಚೈತನ್ಯ ಅವರು ನೋಡಿಕೊಂಡರು.

ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಉಡುಪಿಯ ಜನರಿಗೆ ಸೇವೆ ಸಲ್ಲಿಸುತ್ತಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸಂಬಂಧಿತ ಆಸ್ಪತ್ರೆಯಾದ ಡಾ. ಟಿಎಂಎ ಪೈ ಆಸ್ಪತ್ರೆ ಈ ವರ್ಷದ ಏಪ್ರಿಲ್ ಒಂದ್ದರಿಂದ ಕೋವಿಡ್ -19ಗೆ ಮೀಸಲಾದ ಆಸ್ಪತ್ರೆಯಾಗಿದೆ. ಆಸ್ಪತ್ರೆಯಲ್ಲಿ ಎಲ್ಲಾ ಕೋವಿಡ್-19 ರೋಗಿಗಳಿಗೆ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳು ಸೇರಿದಂತೆ, ಉಚಿತ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ.

Follow us on Social media

About the author