ಬೆಂಗಳೂರು : ಇನ್ನು ಮುಂದೆ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ನಾಯಿಗಳನ್ನು ಜೊತೆಗೊಯ್ದರೆ ಅವುಗಳಿಗೆ ಪೂರ್ಣ ಪ್ರಮಾಣದ ಟಿಕೆಟ್ ಕಡ್ಡಾಯ. ಮರಿ ನಾಯಿಗಳಿಗೆ ಅರ್ಧ ದರ ಹಾಗೂ ದೊಡ್ಡ ನಾಯಿಗಳಿಗೆ ವಯಸ್ಕರಂತೆ ಪರಿಗಣಿಸಿ ಅಷ್ಟೇ ದರ ನಿಗದಿಪಡಿಸಲಾಗಿದೆ.ಸಾಮಾನ್ಯ, ವೇಗದೂತ, ನಗರ, ಹೊರವಲಯದ ಬಸ್‌ಗಳಲ್ಲಿ ಮಾತ್ರ ನಾಯಿಗಳನ್ನು ಜೊತೆಗೊಯ್ಯಲು ಈ ಹಿಂದೆಯೂ ಅವಕಾಶವಿದ್ದು, ಮುಂದೆಯೂ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಅವುಗಳಿಗೆ ಇನ್ನು ಟಿಕೆಟ್ ದರವನ್ನು ಅದರ ಮಾಲಕರ ಟಿಕೆಟ್ ದರದಷ್ಟೇ ಪಾವತಿಸಬೇಕಾಗುತ್ತದೆ.
- ಇನ್ನು ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ 30 ಕೆಜಿವರೆಗಿನ ಲಗೇಜ್‌ನ್ನು ಉಚಿತವಾಗಿ ಸಾಗಿಸಲು ಅವಕಾಶವಿದ್ದು, ಹೆಚ್ಚಿತೂಕದ ಲಗೇಜ್ ಕೊಂಡೊಯ್ದಲ್ಲಿ ಅದಕ್ಕೂ ದರ ನಿಗದಿ ಮಾಡಲಾಗಿದೆ. ಸಾರಿಗೆ ನಿಗಮದ ಬಸ್‌ಗಳಲ್ಲಿ ಅಗತ್ಯ ಸಾಮಾಗ್ರಿ ಹೊರತುಪಡಿಸಿ ಇತರ ಎಲ್ಲಾ ಲಗೇಜ್‌ಗಳಿಗೂ ಈ ಹಿಂದೆ ಹಣ ನೀಡಬೇಕಿತ್ತು. ಆದರೆ ಇದೀಗ ನಿಯಮವನ್ನು ಪರಿಷ್ಕರಣೆ ಮಾಡಲಾಗಿದ್ದು, 30 ಕೆಜಿವರೆಗಿನ ಲಗೇಜ್‌ನ್ನು ಉಚಿತವಾಗಿ ಸಾಗಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.ಒಂದು ವೇಳೆ ನಿಗದಿತ ಕೆಜಿಗಿಂತ ಹೆಚ್ಚಿನ ತೂಕದ ಲಗೇಜ್ ಇದ್ದಲ್ಲಿ ಹೆಚ್ಚಿನ ತೂಕಕ್ಕೆ ಪ್ರಯಾಣದ ದೂರಕ್ಕನುಗುಣವಾಗಿ ದರ ವಿಧಿಸಲಾಗುತ್ತದೆ. ವೈಯಕ್ತಿಕ ಬ್ಯಾಗ್, ಸೂಟ್‌ಕೇಸ್, ಕಿಟ್‌ಬ್ಯಾಗ್, ದಿನಸಿ, ತೆಂಗಿನ ಕಾಯಿ, ರಾಗಿ, ಅಕ್ಕಿ, ಹಿಟ್ಟು, ತರಕಾರಿ, ಹಣ್ಣು, ಹೂವು, ಒಂದು ಸೀಲಿಂಗ್ ಫ್ಯಾನ್, ಒಂದು ಮಿಕ್ಸರ್‌ಗಳನ್ನು 30 ಕೆ.ಜಿ ಒಳಗೆ ಪರಿಗಣಿಸುವಂತೆ ಸೂಚನೆ ನೀಡಲಾಗಿದೆ. ಗ್ರಾಮೀಣ ಭಾಗದ ಜನರಿಗೆ, ಚಿಕ್ಕಪುಟ್ಟ ವ್ಯಾಪಾರಿಗಳಿಗೆ, ದೂರದ ಊರಿಗೆ ಪ್ರಯಾಣ ಬೆಳೆಸುವವರಿಗೆ ಹೊಸ ನಿಯಮ ಸಹಕಾರಿಯಾಗಲಿದೆ.
