Breaking News

ಉ.ಪ್ರದೇಶ ಟ್ರಕ್ ಅಪಘಾತ; ಸಾವಿನ ಸಂಖ್ಯೆ 24ಕ್ಕೆ ಏರಿಕೆ, ಪ್ರಧಾನಿ ಮೋದಿ ಸಂತಾಪ

ಲಖನೌ : ಉತ್ತರ ಪ್ರದೇಶ ಸಂಭವಿಸಿದ ವಲಸೆ ಕಾರ್ಮಿಕರ ಹೊತ್ತಿದ್ದ ಟ್ರಕ್ ಗಳ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಉತ್ತರ ಪ್ರದೇಶದ ಔರೈಯಾದಲ್ಲಿ ನಡೆದ ಭೀಕರ ಅಪಘಾತದಿಂದಾಗಿ ತೀವ್ರ ದುಃಖವಾಗಿದೆ. ಅಪಘಾತದ ಸಂತ್ರಸ್ಥರಿಗೆ ಎಲ್ಲ ರೀತಿಯ ಪರಿಹಾರ ನೀಡುವ ಕಾರ್ಯ ಮಾಡುತ್ತಿದೆ. ಅಪಘಾತ ಸಂತ್ರಸ್ಥರ ಕುಟುಂಬಕ್ಕೆ ದೇವರು ದುಃಖ ತಡೆಯುವ  ಶಕ್ತಿಯನ್ನು ನೀಡಲಿ. ಅಂತೆಯೇ ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಸಾವಿನ ಸಂಖ್ಯೆ 24ಕ್ಕೆ ಏರಿಕೆ
ಇನ್ನು ಅಪಘಾತದಲ್ಲಿ ಸಾವನ್ನಪ್ಪಿದ ವಲಸೆ ಕಾರ್ಮಿಕರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಅಂತೆಯೇ ಘಟನೆಯಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಕಾರ್ಮಿಕರು  ತಮ್ಮ ತವರು ಊರುಗಳತ್ತ ತೆರಳುತ್ತಿದ್ದರು. ಇಂದು ಮುಂಜಾನೆ ಸುಮಾರು 3.30ರ ವೇಳೆಯಲ್ಲಿ ವಲಸೆ ಕಾರ್ಮಿಕರ ತುಂಬಿದ್ದ ಟ್ರಕ್ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಮತ್ತೊಂದು ಟ್ರಕ್ ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಅಪಘಾತದ ವೇಳೆ ಟ್ರಕ್ ನಲ್ಲಿ ಸುಮಾರು 50ಕ್ಕೂ ಹೆಚ್ಚು  ಕಾರ್ಮಿಕರಿದ್ದರು.

ಕಾರ್ಮಿಕರೆಲ್ಲರೂ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಮೂಲದವರಾಗಿದ್ದು, ರಾಜಸ್ತಾನದಿಂದ ಉತ್ತರ ಪ್ರದೇಶದಲ್ಲಿರುವ ತಮ್ಮ ನಿವಾಸಗಳಿಗೆ ಟ್ರಕ್ ನಲ್ಲಿ ತೆರಳುತ್ತಿದ್ದರು.

Follow us on Social media

About the author