Breaking News

ಕಲಬುರಗಿ: ಕೊರೋನಾ ಬಂದ ತಾಲೂಕಿನಲ್ಲೇ ರಥೋತ್ಸವ ಆಚರಣೆ, 40 ಮಂದಿ ವಿರುದ್ಧ ಕೇಸ್

ಕಲಬುರಗಿ: ಕೊರೋನಾ ಕಾಣಿಸಿಕೊಂಡ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಗ್ರಾಮಸ್ಥರು ರಥೋತ್ಸವ ಮಾಡಿದ್ದಾರೆ.

ಚಿತ್ತಾಪುರ ತಾಲೂಕಿನ ರಾವೂರು ಗ್ರಾಮದಲ್ಲಿ ಗುರುವಾರ ನಸುಕಿನ ವೇಳೆ ಕೆಲ‌ವರು ಸಿದ್ಧಲಿಂಗೇಶ್ವರ ರಥವನ್ನು ಎಳೆದಿದ್ದಾರೆ. ರಥೋತ್ಸವದಲ್ಲಿ ನೂರಾರು ಜನರು ಭಾಗಿಯಾಗಿದ್ದು, ಸೀಲ್ ಡೌನ್ ಮಾಡಿರುವ ಪ್ರದೇಶದಿಂದ ಮೂರು ಕಿಲೋ ಮೀಟರ್ ದಲ್ಲಿರುವ ರಾವೂರು ಗ್ರಾಮದಲ್ಲಿ ರಥೋತ್ಸವ ನಡೆಸಲಾಗಿದೆ.

ಇತ್ತೀಚೆಗೆ ತಾಲೂಕಿನ ವಾಡಿ ಪಟ್ಟಣದಲ್ಲಿ ಎರಡು ವರ್ಷದ ಮಗುವಿಗೆ ಕೊರೋನಾ ಸೋಂಕು‌ ತಗುಲಿದೆ. ತಮ್ಮೂರಿನ ಪಕ್ಕದಲ್ಲಿ ಕೊರೋನಾ ಬಂದಿದ್ದರು ಜನ ಎಚ್ಚೆತ್ತುಕೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ.

ಈ ಹಿಂದೆ ರಥೋತ್ಸವ ಮಾಡುವುದಿಲ್ಲಾ ಎಂದು ಗ್ರಾಮಸ್ಥರು ಹೇಳಿದ್ದರು. ಆದರೆ, ಇಂದು ನಸುಕಿನ ಜಾವದಲ್ಲಿ ದಿಢೀರನೆ ರಥೋತ್ಸವ ಕಾರ್ಯ ಮಾಡಿ ಮುಗಿಸಿದ್ದಾರೆ.

ಜಿಲ್ಲೆಯಲ್ಲಿ ಇದೂವರೆಗೂ ಮೂವರು ಕೊರೋನಾಗೆ ಬಲಿಯಾಗಿದ್ದು, ಹದಿನೆಂಟು ಜನರಲ್ಲಿ ಸೋಂಕು ದೃಢವಾಗಿದೆ. ಅಲ್ಲದೆ, ಜಿಲ್ಲೆಯನ್ನು ರೆಡ್ ಜೋನ್ ಎಂದು ಘೋಷಿಸಲಾಗಿದೆ. ಆದರೂ, ನೂರಾರು ಜನ ಸೇರಿ ರಥೋತ್ಸವ ನೆರವೇರಿಸುವ ಮೂಲಕ ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿದ್ದಾರೆ‌.

ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿದ್ದು, ರಾವೂರ್ ಗ್ರಾಮದ 40 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

Follow us on Social media

About the author