Breaking News

ಕುಶಾಲನಗರ ಸಂಪತ್ ಕೊಲೆ ಕೇಸ್‌ – ಮೂವರು ಅರೆಸ್ಟ್‌

ಮಡಿಕೇರಿ: ಮೇ 10ರಂದು ನಾಪತ್ತೆಯಾಗಿದ್ದ ಕೊಡಗಿನ ಸೋಮವಾರಪೇಟೆಯ ನಿವಾಸಿ ಸಂಪತ್‌ ನಾಯರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನ ಹಾನಗಲ್‌ ಗ್ರಾಮದ ಬಿ.ಎಂ ಕಿರಣ್ (44), ಆತನ ಪತ್ನಿ ಸಂಗೀತಾ (35) ಹಾಗೂ ಚೌಡ್ಲು ಗ್ರಾಮದ ಪಿ.ಎಂ ಗಣಪತಿ (43) ಬಂಧಿತ ಆರೋಪಿಗಳಾಗಿದ್ದಾರೆ.

ವೈಯಕ್ತಿಕ ದ್ವೇಷದಿಂದ ಕೊಲೆ ಮಾಡಲು ಸಂಗೀತಾ ಸಂಚು ರೂಪಿಸಿದ್ದಳು. ಅದಕ್ಕಾಗಿ ಮೇ.9ರಂದು ಸಂಪತ್‌ ನಾಯರ್‌ನನ್ನ ಸೋಮವಾರಪೇಟೆಯ ಹಾನಗಲ್‌ನಲ್ಲಿರುವ ತನ್ನ ಮನೆಗೆ ಬರಲು ಹೇಳಿದ್ದಳು. ಸಾಲದ ಹಣ ವಾಪಸ್‌ ಕೊಡುತ್ತೇನೆ ಎಂದು ಕರೆಸಿಕೊಂಡಿದ್ದಳು. ಸಂಪತ್‌ ಮನೆಗೆ ಬಂದ ಮೇಲೆ ಸಂಗೀತಾಳ ಗಂಡ ಕಿರಣ್‌ ಹಾಗೂ ಸ್ನೇಹಿತ ಗಣಪತಿ ಮೂವರು ಸೇರಿ ದೊಣ್ಣೆಯಿಂದ ಹೊಡೆದು, ಕತ್ತಿಯಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆಯನ್ನು ಮರೆಮಾಚಲು ಮೃತ ದೇಹವನ್ನ ಸಂಪತ್ ನಾಯರ್ ತಂದಿದ್ದ ಫಿಯೆಟ್ ಪುಂಟೋ ಕಾರಿನಲ್ಲೇ ಹಾಕಿಕೊಂಡು ಸಕಲೇಶಪುರ ತಾಲೂಕು ಒಳಗೂರು ಅರಣ್ಯದಲ್ಲಿ ಬಿಸಾಡಿದ್ದಾರೆ. ಬಳಿಕ ಕಲ್ಲಳ್ಳಿ ಬಳಿ ಆತನ ಕಾರು ನಿಲ್ಲಿಸಿ ಬೇರೊಂದು ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದರು. ಮೇ 16 ರಂದು ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಿರಣ್‌ನನ್ನ ಬೆಂಗಳೂರಿನಲ್ಲಿ ಬಂಧಿಸಲಾಯಿತು. ಇನ್ನೂ ಮೇ 17ರಂದು ಬೆಳ್ತಂಗಡಿಯ ಅಂಗಡಿಯಲ್ಲಿ ಮತ್ತೊಬ್ಬ ಆರೋಪಿ ಗಣಪತಿ ಹಾಗೂ ಮೇ 18ರಂದು (ಇಂದು) ಆರೋಪಿ ಸಂಗೀತಾಳನ್ನ ಸೋಮವಾರ ಪೇಟೆಯಲ್ಲಿ ಬಂಧಿಸಲಾಯಿತು.

ಪೊಲೀಸರು ವಿಚಾರಣೆ ನಡೆಸಿದ ಬಳಿಕ ತಪ್ಪೊಪ್ಪಿಕೊಂಡು ಘಟನೆಯ ವಿವರಣೆ ನೀಡಿದ್ದಾರೆ. ಈ ಸಂಬಂಧ ಕೃತ್ಯಕ್ಕೆ ಬಳಸಲಾದ ದೊಣ್ಣೆ, ಕತ್ತಿ ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣದ ತನಿಖೆ ಮುಂದುವರಿಸಲಾಗಿದೆ. ಈ ಕುರಿತು ಮಾತನಾಡಿರುವ ಎಸ್ಪಿ ರಾಮರಾಜನ್, ಆರೋಪಿಗಳು ತಲೆಮರಿಸಿಕೊಳ್ಳಲು ಸಹಕರಿಸಿದ ಇತರರನ್ನ ಸದ್ಯದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಕಿರಣ್, ಗಣಪತಿ, ಸಂಪತ್ ನಾಯರ್ ಸ್ನೇಹಿತರಾಗಿದ್ದು, ಮೂವರು, ಹಣಕಾಸು ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಆದ್ರೆ ಸಂಪತ್‌ ಕಿರಣ್‌ ಪತ್ನಿ ಸಂಗೀತಾಳ ವಿಡಿಯೋ ಒಂದನ್ನ ಇಟ್ಟುಕೊಂಡು ಆಗಾಗ್ಗೆ ಬ್ಲ್ಯಾಕ್‌ಮೇಲ್‌ ಮಾಡ್ತಿದ್ದ. ಅಲ್ಲದೇ ಈ ಹಿಂದೆ ಸಂಗೀತಾ ಕೆಲವು ತಿಂಗಳ ಕಾಲ ಸಂಪತ್‌ನ ಜೊತೆಗಿದ್ದಳು. ಪುನಃ ತನ್ನ ಗಂಡ ಕಿರಣ್‌ಜೊತೆಗೆ ಬಾಳ್ವೆ ನಡೆಸುತ್ತಿದ್ದಳು. ಆಕೆ ಸಂಪತ್‌ನೊಂದಿಗೆ ಇದ್ದ ಸಂದರ್ಭದಲ್ಲಿ 20 ಲಕ್ಷ ಹಣ ಪಡೆದುಕೊಂಡಿದ್ದಳು. ಅದನ್ನು ವಾಪಸ್‌ ನೀಡದೇ ಇದ್ದಿದ್ದಕ್ಕೆ ಸಂಪತ್ ಬ್ಲ್ಯಾಕ್‌ಮೇಲ್‌ ಮಾಡಲು ಶುರು ಮಾಡಿದ್ದ. ಇದರಿಂದ ರೊಚ್ಚಿಗೆದ್ದ ಕಿರಣ್‌, ಸಂಗೀತಾ ಆಕೆಯ ಸಂಬಂಧಿ ಗಣಪತಿಯೊಂದಿಗೆ ಸೇರಿ ಸ್ಕೆಚ್ ಹಾಕಿ, ಸಂಪತ್‌ನನ್ನ ಮುಗಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Follow us on Social media

About the author