ಮಂಗಳೂರು: ಸಮುದ್ರ ಮಧ್ಯದಲ್ಲಿ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಸರಕು ಹಡಗು ಮಂಗಳೂರಿನಿಂದ 60 ನಾಟಿಕಲ್ ಮೈಲ್ ದೂರದಲ್ಲಿ ಮುಳುಗಡೆಯಾಗಿದೆ.
ಎಂಎಸ್ವಿ ಸಲಾಮತ್ ಹೆಸರಿನ ಮಂಗಳೂರಿನ ಸರಕು ಸಾಗಣೆ ಹಡಗು ಮೇ 12ರಂದು ಮಂಗಳೂರು ಬಂದರಿನಿಂದ ಸಿಮೆಂಟ್ ಹಾಗೂ ನಿರ್ಮಾಣ ಸಾಮಾಗ್ರಿ ಹೊತ್ತುಕೊಂಡು ಲಕ್ಷದ್ವೀಪದತ್ತ ಪ್ರಯಾಣ ಆರಂಭಿಸಿತ್ತು.
ಮೇ18 ರಂದು ಲಕ್ಷದ್ವೀಪದ ಕಡಮತ್ ದ್ವೀಪಕ್ಕೆ ತಲುಪಬೇಕಾಗಿತ್ತು. ದಾರಿ ಮಧ್ಯೆ ತಾಂತ್ರಿಕ ಸಮಸ್ಯೆಯಿಂದ ಒಳಗಡೆ ನೀರು ನುಗ್ಗಿ ಹಡಗು ಮುಳುಗಿದೆ. ಹಡಗಿನಲ್ಲಿ 6 ಭಾರತೀಯ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಎಲ್ಲಾಸಿಬ್ಬಂದಿ ಹಡಗಿನಿಂದ ಹಾರಿ ಸಣ್ಣ ಡಿಂಗಿ ಬೋಟಿನಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆ.
ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ನ ‘ವಿಕ್ರಂ’ ಶಿಪ್ ನಲ್ಲಿ ರಕ್ಷಣೆ ಮಾಡಲಾಗಿದೆ. ಇಸ್ಮಾಯಿಲ್ ಶರೀಫ್, ಅಲೆಮನ್ ಅಹ್ಮದ್ ಬಾಯ್ ಗಾವ್ಡ, ಕಾಕಲ್ ಸುಲೇಮಾನ್ ಇಸ್ಮಾಯಿಲ್, ಅಕ್ಬರ್ ಅಬ್ದುಲ್ ಸುರಾನಿ, ಕಸಂ ಇಸ್ಮಾಯಿಲ್ ಮತ್ತು ಅಜ್ಮಲ್ ಅವರನ್ನು ರಕ್ಷಿಸಲಾಗಿದೆ.
Follow us on Social media