Breaking News

ಅಕ್ರಮ ಗಣಿಗಾರಿಕೆ ಕೇಸ್- ಜನಾರ್ದನ ರೆಡ್ಡಿಗೆ 7 ವರ್ಷ ಜೈಲು

ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜನಾರ್ದನ ರೆಡ್ಡಿ ದೋಷಿ ಎಂದು ಸಿಬಿಐ ಕೋರ್ಟ್‌ ತೀರ್ಪು ನೀಡಿದೆ.

ಗಾಲಿ ಜನಾರ್ದನ ರೆಡ್ಡಿ ಜೊತೆಗೆ ಶ್ರೀನಿವಾಸ್‌ ರೆಡ್ಡಿ ಮತ್ತು ಅಲಿ ಖಾನ್‌ಗೆ ಕೋರ್ಟ್‌ ಸೇರಿ ಐದು ಆರೋಪಿಗಳಿಗೆ ತಲಾ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಪ್ರಕರಣದಲ್ಲಿ ಅವಿಭಜಿತ ಆಂಧ್ರಪ್ರದೇಶ ಗಣಿ ಸಚಿವೆಯಾಗಿದ್ದ ಸಬಿತಾ ಇಂದ್ರರೆಡ್ಡಿ, ಕೃಷ್ಣ ನಂದಾಗೆ ಕೋರ್ಟ್‌ ಕ್ಲೀನ್‌ಚಿಟ್‌ ನೀಡಿದೆ.

ಏನಿದು ಪ್ರಕರಣ?
ಆಂಧ್ರ-ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್-ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ನಡೆದಿದ್ದ ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಓಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಮತ್ತು ಜನಾರ್ದನರೆಡ್ಡಿ ಈ ಕಂಪನಿಯ ಮುಖ್ಯಸ್ಥರಾಗಿದ್ದರು. ಈ ಕಂಪನಿಗೆ ಗಣಿ‌ಗಾರಿಕೆ ಮಂಜೂರಾತಿ ನೀಡುವಲ್ಲಿ ಅರಣ್ಯ ಇಲಾಖೆ ಹಾಗೂ ಗಣಿ‌ ಇಲಾಖೆಯಿಂದಲೂ ಅಕ್ರಮ‌ ನಡೆದಿತ್ತು. ಇದರಲ್ಲಿ ರಾಜ್ಯದ 29 ಲಕ್ಷ ಟನ್ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ. ಆದಾಯ ಪಡೆದಿದ್ದಾರೆ ಎನ್ನುವ ಆರೋಪವಿದೆ. ಈ ಪ್ರಕರಣದಲ್ಲಿ ಶ್ರೀನಿವಾಸರೆಡ್ಡಿ, ಜನಾರ್ದನ ರೆಡ್ಡಿ, ಆಪ್ತ ಅಲಿಖಾನ್, ಗಣಿ ಇಲಾಖೆಯ ನಿರ್ದೇಶಕ ರಾಜಗೋಪಾಲ್, ಆಂಧ್ರದ ಮಾಜಿ ಸಚಿವೆ ಸಬಿತಾ ಇಂದ್ರಾರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಕೃಪಾನಂದ, ಶ್ರೀಲಕ್ಷ್ಮೀ ಇದ್ದಾರೆ.

2009ರಲ್ಲಿ ಆಂಧ್ರದ ಅಂದಿನ ಮುಖ್ಯಮಂತ್ರಿ ಕಾಂಗ್ರೆಸ್‌ನ ರೋಷಯ್ಯ ಅವರು 2009 ರಲ್ಲಿ ಈ ಪ್ರಕರಣವನ್ನು‌ ಸಿಬಿಐ ತನಿಖೆಗೆ ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರ ಸೆಪ್ಟೆಂಬರ್ 5 ರಂದು ಜನಾರ್ದನ ರೆಡ್ಡಿ, ಶ್ರೀನಿವಾಸರೆಡ್ಡಿ ಸಿಬಿಐನಿಂದ ಬಂಧಿತರಾಗಿ, ಮೂರುವರೆ ವರ್ಷಗಳ ಕಾಲ ಚಂಚಲಗುಡ ಮತ್ತು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ವಾಸ ಅನುಭವಿಸಿದ್ದರು. ಪ್ರಕರಣದಲ್ಲಿ ಟಪಾಲ್ ಗಣೇಶ ಮತ್ತವರ ಸಹೋದರ ಏಕಾಂಬರಂ, ಪ್ರಮುಖ ಸಾಕ್ಷಿಯಾಗಿದ್ದು, ಈಗಾಗಲೇ ಸಿಬಿಐ 3400 ಕ್ಕೂ ಹೆಚ್ಚು ದಾಖಲೆಗಳ‌ ಪರಿಶೀಲನೆ ಹಾಗೂ 219ಕ್ಕೂ ಹೆಚ್ವು ಸಾಕ್ಷಿಗಳ ವಿಚಾರಣೆ ನಡೆಸಿದೆ.

ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ ಎಲ್ಲಾ ಆರೋಪಿಗಳು ಜೈಲಿಗೆ ಹೋಗೇ ಹೋಗ್ತಾರೆ ಎಂದು ಟಪಾಲ್ ಗಣೇಶ್ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಹಿಂದೆ ಜನಾರ್ದನ ರೆಡ್ಡಿ ಹಾಗೂ ಅವರ ಪಟಾಲಂನಿಂದ ಅನುಭವಿಸಿದ್ದ ಕಿರುಕುಳದ ಬಗ್ಗೆಯೂ ಇಂಚಿಂಚಾಗಿ ತೆರೆದಿಟ್ಟಿದ್ದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×