Breaking News

ಚಂಡಮಾರುತ ಪ್ರಸರಣ: ಇಂದಿನಿಂದ 5 ದಿನ ಭಾರೀ ಮಳೆ

ಬೆಂಗಳೂರು: ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರ ಮುಂದುವರಿದಿದೆ. ಕರಾವಳಿ ಜಿಲ್ಲೆಗಳು ಹಾಗೂ ಒಳನಾಡಿನ ಜಿಲ್ಲೆಗಳಾದ್ಯಂತ ಆಗಾಗ ಭಾರೀ ಮಳೆ ಆಗುತ್ತಿದೆ. ಗುಡುಗು ಸಹಿತ ಅತ್ಯಧಿಕ ಮಳೆ ಆರ್ಭಟ ಇಂದಿನಿಂದ ಮುಂದಿನ 05 ದಿನಗಳವರೆಗೆ (ಮೇ 23) ಕಂಡು ಬರಲಿದೆ. ಇದರಲ್ಲಿ ಮುಂದಿನ ಎರಡು ದಿನ ಬಿರುಗಾಳಿ ಸಹಿತ ಮಳೆ ಆಗಲಿದೆ. 03 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’, 15 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಚಂಡಮಾರುತ ವೈಪರೀತ್ಯದ ಪ್ರಭಾವದಿಂದಾಗಿ ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಬಹುತೇಕ ಒಳನಾಡು ಜಿಲ್ಲೆಗಳ ಪ್ರದೇಶಗಳಲ್ಲಿ ಪೂರ್ವ ಮುಂಗಾರು ಮಳೆ ಹೆಚ್ಚು ಸಕ್ರಿಯವಾಗಿದೆ. ರಾಜ್ಯದ ವಿವಿಧೆಡೆ ಜೋರು ಮಳೆ ದಾಖಲಾಗಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಳೆ ಅವಾಂತರ ಸೃಷ್ಟಿಸುತ್ತಿದೆ. ಮಳೆ ಹಾನಿ ಉಂಟಾಗಿದೆ. ಮುಂದಿನ 05 ದಿನಗಳಲ್ಲಿ ಒಂದೊಂದು ದಿನ ಒಂದೊಂದು ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ತಜ್ಞರು ಖಚಿತಪಡಿಸಿದ್ದಾರೆ.

ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೇ 21 ಮತ್ತು 22ರಂದು ಅತೀ ಹೆಚ್ಚು ಮಳೆ ಅಂದರೆ ಗರಿಷ್ಠ 200 ಮಿಲಿ ಮೀಟರ್ ಗೂ ಹೆಚ್ಚು ಮಳೆ ಬರಲಿರುವ ಹಿನ್ನೆಲೆಯಲ್ಲಿ ಮೂರು ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.

ಇನ್ನೂ ಮೇ 21ರವರೆಗೆ ಕರಾವಳಿ ಈ ಜಿಲ್ಲೆಗಳು ಸೇರಿದಂತೆ ಬೆಳಗಾವಿ, ಬಾಗಲಕೋಟ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಈ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ನೀಡಿದೆ.

ನಂತರ ಮೇ 23ರವರೆಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆ ಬರಲಿದ್ದು, ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಇದೇ ಅವಧಿಯಲ್ಲಿ ಒಳನಾಡಿನ ಇತರ ಜಿಲ್ಲೆಗಳಿಗೆ ಪ್ರತ್ಯೇಕ ದಿನಗಳಂದು ಸಾಧಾರಣದಿಂದ ಭಾರೀ ಮಳೆ ಪ್ರಯುಕ್ತ ‘ಯೆಲ್ಲೋ ಅಲರ್ಟ್’ ಕೊಡಲಾಗಿದೆ.

Follow us on Social media

About the author