ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಫಾಜಿಲ್ ಸಹೋದರ ಸುಪಾರಿ ನೀಡಿದ್ದ ವಿಚಾರ ಬಹಿರಂಗವಾಗಿತ್ತು. ಆದರೆ, ಇದೀಗ ವಿದೇಶದಿಂದಲೂ ಹಣ ಕಳುಹಿಸಲಾಗಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಆ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಅನೇಕ ಕಾಣದ ಕೈಗಳ ಕೈವಾಡ ಶಂಕೆ ವ್ಯಕ್ತವಾಗಿದ್ದು, ವಿವಿಧ ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ. ಹತ್ಯೆ ನಡೆಸಲು ನೆರವು ನೀಡುವಂತೆ ಪ್ರಮುಖ ಆರೋಪಿ ಸಫ್ವಾನ್ ಅನೇಕರನ್ನು ಸಂಪರ್ಕಿಸಿದ್ದ. ಆ ಸಂದರ್ಭದಲ್ಲಿ ಜೈಲು, ಜಾಮೀನಿಗೆ ನೆರವಿಗಾಗಿ ಕೈಚಾಚಿದ್ದ ಎನ್ನಲಾಗಿದೆ.
ಕೊಲೆ ಮಾಡಿದ ಕೂಡಲೇ ಪೊಲೀಸರಿಗೆ ಶರಣಾಗುವ ಬಗ್ಗೆಯೂ ಹಂತಕರ ಗುಂಪು ಚರ್ಚೆ ನಡೆಸಿತ್ತು. ಹಂತಕರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಕಾಣದ ಕೈಗಳ ಗುಂಪು ಮಾಡಿತ್ತೇ ಎಂಬ ಬಲವಾದ ಅನುಮಾನ ಸೃಷ್ಟಿಯಾಗಿದೆ.
ಸುಹಾಸ್ ಶೆಟ್ಟಿ ಕೊಲೆಗೆ ಮೂರು ತಿಂಗಳ ಹಿಂದೆಯೇ ಸಂಚು ಹೂಡಲಾಗಿತ್ತು. ಜನವರಿಯಲ್ಲೇ ಸಫ್ವಾನ್ ತಂಡಕ್ಕೆ ಫಾಜಿಲ್ (ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಹತ್ಯೆಗೊಳಗಾಗಿದ್ದ ಯುವಕ) ತಮ್ಮ ಆದಿಲ್ 3 ಲಕ್ಷ ರೂಪಾಯಿ ಹಣ ಕೊಟ್ಟಿದ್ದ. ಕೃತ್ಯಕ್ಕಾಗಿ ಒಂದು ಪಿಕ್ ಅಪ್ ವಾಹನ, ಸ್ವಿಫ್ಟ್ ಕಾರ್ ಬಳಕೆ ಮಾಡಿದ್ದ. ಅಕಸ್ಮಾತ್ ಸುಹಾಸ್ ಶೆಟ್ಟಿ ತಪ್ಪಿಸಿಕೊಂಡರೆ ಪ್ಲಾನ್ ಬಿಯನ್ನೂ ರೆಡಿ ಮಾಡಿಕೊಳ್ಳಲಾಗಿತ್ತು ಎಂಬುದು ತಿಳಿದುಬಂದಿದೆ.
ಸುಹಾಸ್ ಶೆಟ್ಟಿ ಚಲನ ವಲನಗಳ ಮೇಲೆ ಪ್ರಮುಖ ಆರೋಪಿ ಸಫ್ವಾನ್ 15 ದಿನಗಳಿಂದ ಗಮನ ಇರಿಸಿದ್ದ. ಹುಡುಗರನ್ನು ಬಿಟ್ಟು ರೇಖಿ ಮಾಡಿಸಿದ್ದ. ಚಿಕ್ಕಮಗಳೂರಿನ ಕಳಸಾದ ರಂಜಿತ್ ಹಾಗೂ ನಾಗರಾಜ್ 15 ದಿನಗಳಿಂದ ಸಫ್ವಾನ್ ಮನೆಯಲ್ಲೇ ಇದ್ದರು. ಸುಹಾಸ್ ಶೆಟ್ಟಿ ಬಜ್ಪೆಗೆ ಬರುವ ಬಗ್ಗೆ ಅಝರುದ್ಧಿನ್ ಮಾಹಿತಿ ನೀಡಿದ್ದ. ಎಷ್ಟು ಗಂಟೆಗೆ ಸುಹಾಸ್ ಹೊರಡುತ್ತಾನೆ, ಅವನೊಂದಿಗೆ ಯಾರಿದ್ದಾರೆ ಎಂಬುದನ್ನು ಸಫ್ವಾನ್ಗೆ ಮಾಹಿತಿ ನೀಡಿದ್ದ. ಸುಹಾಸ್ ಶೆಟ್ಟಿ ಹತ್ಯೆಯಾಗುತ್ತಿದ್ದಂತೆಯೇ ಅಝರುದ್ದೀನ್ ತಲೆ ಮರೆಸಿಕೊಂಡು ಪರಾರಿಯಾಗಿದ್ದಾನೆ. ಸದ್ಯ ಆತನ ಬಂಧನಕ್ಕೆ ಮಂಗಳೂರು ಪೊಲೀಸರ ತಂಡ ಕಾರ್ಯಾಚರಣೆ ನಡೆಸುತ್ತಿದೆ.
ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಹಂತಕರ ತಂಡ ಭರ್ಜರಿ ಪಾರ್ಟಿ ಮಾಡಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಹತ್ಯೆಗೆ ಸ್ಕೆಚ್ ರೂಪಿಸಲು ಎಪ್ರಿಲ್ 2ರಂದು ರಹಸ್ಯ ಸ್ಥಳದಲ್ಲಿ ಪಾರ್ಟಿ ಮಾಡಿದ್ದ ಶಂಕೆ ವ್ಯಕ್ತವಾಗಿದೆ. ಚಿಕ್ಕಮಗಳೂರಿನ ಕಳಸದ ರೆಸಾರ್ಟ್ ಒಂದರಲ್ಲಿ ಆರೋಪಿಗಳು ಪಾರ್ಟಿ ಮಾಡಿದ್ದು ಎನ್ನಲಾದ ಫೋಟೊ ಈಗ ಬಯಲಾಗಿದೆ.
Follow us on Social media