ಮಂಗಳೂರು: ಗುರುವಾರ ರಾತ್ರಿ ನಡೆದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಹತ್ಯೆಯನ್ನು ಖಂಡಿಸಿ ಶುಕ್ರವಾರ (ಇಂದು) ಬೆಳಿಗ್ಗೆ 6 ಗಂಟೆಯಿಂದ ಸಂಜೆ 6:00 ಗಂಟೆಯ ತನಕ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಗೆ ಹಿಂದು ಸಂಘಟನೆ ಕರೆ ನೀಡಿದೆ.
ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮೇ 6 ಮೇರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಅಂತಿಮ ಯಾತ್ರೆ:
ಶುಕ್ರವಾರ ಬೆಳಗ್ಗೆ 10:30ಕ್ಕೆ ಎಜೆ ಆಸ್ಪತ್ರೆಯಿಂದ ಕಾರಿಂಜದ ತನಕ ಸುಹಾಸ್ ಅಂತಿಮ ಯಾತ್ರೆ ನಡೆಯಲಿದೆ. ಹತ್ಯೆಯನ್ನು ಖಂಡಿಸಿ ಪ್ರಾಂತದ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಂಘಟನೆಗಳಿಂದ ಪ್ರತಿಭಟನೆಗಳು ಆಯೋಜಿಸಲಾಗುವುದು ಎಂದು ವಿಹಿಂಪ ಪ್ರಾಂತ ಸಂಯೋಜಕರಾದ ದೋ ಕೇಶವಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಹಾಸ್ ಹತ್ಯೆ ಖಂಡಿಸಿ ವಿಹಿಂಪ ದ.ಕ. ಜಿಲ್ಲಾ ಬಂದ್ ಕರೆ ನೀಡಿರುವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಕೆಎಸ್ ಆರ್ ಪಿ ನಿಯೋಜಿಸಲಾಗಿದೆ. ಪೊಲೀಸರು ಗಸ್ತು ತಿರುಗುತ್ತಿದ್ದು, ವಾಹನ ತಪಾಸಣೆ ಬಿಗಿಗೊಳಿಸಲಾಗಿದೆ. ತಡರಾತ್ರಿಯವರೆಗೆ ಎ.ಜೆ. ಆಸ್ಪತ್ರೆಯಲ್ಲಿ ಜನ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಜಪೆ ಕಿನ್ನಿಪದವಿನಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಗಳು ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಎಂಬಾತನನ್ನು ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆಗೈದ ಹಿನ್ನಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮೇ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಆದೇಶಿಸಿದ್ದಾರೆ.
Follow us on Social media