Breaking News

ಮಂಗಳೂರಿನ ಮೀನು ಸಂಸ್ಕಾರಣಾ ಘಟಕದಲ್ಲಿ ಐವರು ಕಾರ್ಮಿಕರ ಸಾವು!

ಮಂಗಳೂರು: ಏಪ್ರಿಲ್ 18 (ಯು.ಎನ್. ಐ.) ಮಂಗಳೂರಿನ ಮೀನು ಸಂಸ್ಕರಣಾ ಘಟಕದಲ್ಲಿ ಉಸಿರುಗಟ್ಟಿ ಐವರು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದ ಐವರು ಕಾರ್ಮಿಕರು ಮೀನು ಸಂಸ್ಕರಣಾ ಘಟಕದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸೋಮವಾರ ತಿಳಿಸಿದ್ದಾರೆ.

ಮಂಗಳೂರಿನ ವಿಶೇಷ ಆರ್ಥಿಕ ವಲಯದ ಮೀನು ಸಂಸ್ಕರಣಾ ಘಟಕ ಶ್ರೀ ಉಲ್ಕಾ ಎಲ್‌ಎಲ್‌ಪಿಯಲ್ಲಿ ಭಾನುವಾರ ಸಂಜೆ 7 ಗಂಟೆಗೆ ಈ ಘಟನೆ ನಡೆದಿದೆ.

ಮೊದಲಿಗೆ ಓರ್ವ ಕಾರ್ಮಿಕ ತ್ಯಾಜ್ಯ ಸಂಗ್ರಹ ತೊಟ್ಟಿಯೊಳಗೆ ಇಳಿದಾಗ ಅದರೊಳಗೆ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ. ಆತನನ್ನು ಉಳಿಸಲು ಇತರ ಏಳು ಕಾರ್ಮಿಕರು ಟ್ಯಾಂಕ್‌ಗೆ ಇಳಿದಾಗ ಅವರೂ ಪ್ರಜ್ಞೆ ಕಳೆದುಕೊಂಡರು. ಅವರನ್ನು ಎಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಮೂವರು ನಿನ್ನೆ ರಾತ್ರಿ ಸಾವನ್ನಪ್ಪಿದರು. ಇಬ್ಬರು ಇಂದು ಬೆಳಿಗ್ಗೆ ಐಸಿಯುನಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಕಾರ್ಮಿಕರೆಲ್ಲರೂ ಪಶ್ಚಿಮ ಬಂಗಾಳದ ಮೂಲದವರಾಗಿದ್ದು, 20 ರಿಂದ 22 ವರ್ಷ ವಯಸ್ಸಿನವರು. ಐಸಿಯುನಲ್ಲಿರುವ ಇತರ ಮೂವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಸಂಸ್ಕರಣಾ ಘಟಕದ ಮ್ಯಾನೇಜರ್ ಮತ್ತು ಮೇಲ್ವಿಚಾರಕನ ವಿರುದ್ಧ ಐಪಿಸಿಯ ಸೆಕ್ಷನ್ 304 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದು, ಪ್ರೊಡಕ್ಷನ್ ಮ್ಯಾನೇಜರ್ ರೂಬಿ ಜೋಸೆಫ್, ಏರಿಯಾ ಮ್ಯಾನೇಜರ್ ಕುಬೇರ್ ಗಾಡೆ ಮತ್ತು ಮೇಲ್ವಿಚಾರಕರಾದ ಮೊಹಮ್ಮದ್ ಅನ್ವರ್ ಮತ್ತು ಫಾರೂಖ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಮೀನು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆಯಿಂದ ಐವರು ಸಾವನ್ನಪ್ಪಿರುವ ಶಂಕೆಯಿದ್ದು, ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ

Follow us on Social media

About the author