Breaking News

ಆರೋಗ್ಯ ಸೇತು ಆ್ಯಪ್ ನಿಂದ ಖಾಸಗಿ ಮಾಹಿತಿ ಸೋರಿಕೆಯಾಗಿಲ್ಲ: ರವಿಶಂಕರ್ ಪ್ರಸಾದ್

ನವದೆಹಲಿ: ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚುವ ಆರೋಗ್ಯ ಸೇತು ಆ್ಯಪ್ ನಲ್ಲಿ ಭದ್ರತಾ ಲೋಪವಿಲ್ಲ. ಆಪ್ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಖಾಸಗಿ ಮಾಹಿತಿ ಸೋರಿಕೆಯಾಗಿಲ್ಲ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.

ಈ ಆ್ಯಪ್ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳ ಮೇಲೆ ನಿಗಾ ಇರಿಸುತ್ತದೆ ಮತ್ತು ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದೆ.

ಹಾಟ್ ಎಂಬ ಫ್ರಾನ್ಸ್ ಮೂಲದ ಹ್ಯಾಂಕ್ ಗ್ರೂಪ್ ವೊಂದು 90 ಮಿಲಿಯನ್ ಜನರ ವೈಯಕ್ತಿಕ ಮಾಹಿತಿಗಳು ಅಪಾಯದಲ್ಲಿವೆ ಎಂಬ ಎಚ್ಚರಿಕೆ ನೀಡಿದ ಬೆನ್ನಲ್ಲೇ ಆರೋಗ್ಯ ಸೇತು ಆ್ಯಪ್ ಮೂಲಕ ಯಾವುದೇ ಖಾಸಗಿ ಮಾಹಿತಿ ಸೋರಿಕೆಯಾಗಿಲ್ಲ ಎಂದು ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.

ಈ ಆ್ಯಪ್ ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಸಚಿವರು, ಆರೋಗ್ಯ ಸೇತು ಆ್ಯಪ್ ಅತ್ಯಂತ ಸುರಕ್ಷಿತವಾಗಿದೆ. ಮಾಹಿತಿ ಸೋರಿಕೆಯಾಗಿಲ್ಲ. ವ್ಯಕ್ತಿಗಳನ್ನು ಗುರುತಿಸಲು ಆಗದ ರೀತಿಯಲ್ಲಿ ಅದನ್ನು ರೂಪಿಸಲಾಗಿದೆ. ಕೊರೋನಾ ಸಮಸ್ಯೆ ಎದುರಿಸಲು ಮಾತ್ರ ಅದರ ಬಳಕೆಯಾಗಿದೆ ಎಂದಿದ್ದಾರೆ.

ಇದು ಖಾಯಂ ಆ್ಯಪ್ ಅಲ್ಲ. ಕೊರೋನಾ ನಿಯಂತ್ರಣಕ್ಕಾಗಿ ವಿವಿಧ ದೇಶಗಳು ಇಂತಹ ಆ್ಯಪ್ ಗಳನ್ನು ಹೊರ ತಂದಿದೆ ಎಂದು ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.

Follow us on Social media

About the author