ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಂಡಿಸಿರುವ ಬಜೆಟ್ ಮುನ್ನೋಟವಿಲ್ಲದ ಬಜೆಟ್ ಆಗಿದ್ದು, ಹಸಿರು ಶಾಲು ಹಾಕಿದರೆ ರೈತರು ಉದ್ಧಾರ ಆಗುತ್ತಾರೆಯೇ? ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.
ವಿಧಾನಸೌಧದಲ್ಲಿಂದು ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಲಿಂಬೆಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದಂತಹ ಯಡಿಯೂರಪ್ಪ ನಿಜವಾಗಿಯೂ ವ್ಯವಸಾಯ ಮಾಡಿದ್ದಾರೆಯೋ ಏನೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು. ನಾನು ಸಹ ಮೂರು ವರ್ಷ ಹಸಿರು ಶಾಲು ಹಾಕಿಕೊಂಡಿದ್ದೆ, ಅವರು ಯಾವುದಾದರೂ ಶಾಲು ಹಾಕಿಕೊಳ್ಳಲಿ. ಆದರೆ ಬಜೆಟ್ ನಲ್ಲಿ ಸುಳ್ಳು ಹೇಳುವುದೇಕೆ? ನೀರಾವರಿ, ಕೃಷಿಗೆ ಯಾವುದೇ ವಿಶೇಷ ಅನುದಾನ ನೀಡಿಲ್ಲ ಎಂದು ಕುಟುಕಿದರು.
ಕೃಷಿ, ಕೈಗಾರಿಕೆ ಸೇವಾ ವಲಯ ಮೂರು ಕ್ಷೇತ್ರದಲ್ಲಿಯೂ ಜಿಡಿಪಿ ಕಡಿಮೆಯಾಗಿದೆ. ಕೈಗಾರಿಕೆಯಲ್ಲಿ ಶೇ. 5.6, ಸೇವಾ ವಲಯ ಶೇ.7 ಕ್ಕೆ ಇಳಿದಿದೆ. ಕೃಷಿಗೆ ಬಜೆಟ್‌ನಲ್ಲಿ ಏನನ್ನೂ ಕೊಟ್ಟಿಲ್ಲ. ಸಣ್ಣ ನೀರಾವರಿ ಸೇರಿ ಮಹದಾಯಿಗೆ 500 ಕೋಟಿ ಎತ್ತಿನಹೊಳೆಗೆ 1500 ಕೋಟಿ ಸೇರಿದಂತೆ ನೀರಾವರಿಗೆ ಕೇವಲ 21 ಸಾವಿರ ಕೋಟಿ ನೀಡಿದ್ದಾರೆ ಅಷ್ಟೆ. ಬರೀ ಕೃಷ್ಣಾ ಮೇಲ್ದಂಡೆ ಯೋಜನೆಯೊಂದಕ್ಕೆ 40 ಸಾವಿರ ಕೋಟಿ ಬೇಕಾಗುತ್ತದೆ ಎಂದು ವಿವರಿಸಿದರು.
ಮಹದಾಯಿ ಸಮಸ್ಯೆ ಬಗೆಹರಿಸಿದ್ದೇವೆ ಎಂದು ಹೇಳಿ ಬಿಜೆಪಿ ಸರ್ಕಾರ ಅದರ ರಾಜಕೀಯ ಲಾಭ ತೆಗೆದುಕೊಳ್ಳುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇದಕ್ಕಾಗಿ ಕಾನೂನು ಹೋರಾಟ ನಡೆದಿತ್ತು. ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿದೆ. ಇದರಲ್ಲಿ ಬಿಜೆಪಿಯವರ ಪಾತ್ರ ಏನಿದೆ?. ಗೋವಾ ಸಿಎಂ ಜೊತೆ ಮಾತನಾಡಲು ಇವರಿಗೆ ಆಗಲಿಲ್ಲ. ಮಹದಾಯಿ ಯೋಜನೆಯನ್ನು ಕನಿಷ್ಠ 2 ವರ್ಷಗಳಲ್ಲಿ ಪೂರ್ಣಗೊಳಿಸಬೇಕು. ಆದ್ಯತೆ ಮೇಲೆ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಬಜೆಟ್‌ನಲ್ಲಿ ಹೊಸ ಕಾರ್ಯಕ್ರಮ ಯಾವುದೂ ಇಲ್ಲ. 2020ರ ಹೊಸ ಘೋಷಣೆಗಳು ಎಂದು ಬಜೆಟ್‌ನಲ್ಲಿ ಹಳೆ ಯೋಜನೆಯನ್ನೇ ತೋರಿಸಲಾಗಿದೆ. ಭಾಗ್ಯಲಕ್ಷ್ಮಿ, ಸೈಕಲ್ ಯೋಜನೆ ಮಾತ್ರ ಹೇಳಿದ್ದಾರೆ. ಆಹಾರ ಇಲಾಖೆಗೆ ಶೇಕಡಾ 1ರಷ್ಟು ಅನುದಾನ ಕಡಿಮೆ ಮಾಡಿದ್ದಾರೆ. ಇನ್ನೂ ಯಾವ ಯಾವ ಯೋಜನೆ ನಿಲ್ಲಿಸುತ್ತಾರೆಯೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಸ್ ಸಿ ಪಿ, ಟಿಎಸ್ ಪಿ ಯಲ್ಲಿ 30,150 ಕೋಟಿ ಇದ್ದಿದ್ದು ಸುಮಾರು 4 ಸಾವಿರ ಕೋಟಿ ಹೆಚ್ಚಳವಾಗಬೇಕಿತ್ತು. ಬಜೆಟ್ ಗಾತ್ರ ಹೆಚ್ಚಾದಂತೆ ಆ ಯೋಜನೆಗೂ ಹೆಚ್ಚಿನ ಅನುದಾನ ನೀಡಬೇಕಿತ್ತು. ಆದರೆ ಅದು ಆಗಿಲ್ಲ. ಮೂಗಿಗೆ ತುಪ್ಪ ಹಚ್ಚಲು ಘೋಷಣೆ ಮಾಡಿದ್ದಾರೆ. ರೈತರ ಸಾಲ ಮನ್ನಾ ಯೋಜನೆ ಏನಾಯಿತು ಎಂದು ಹೇಳಬೇಕಿತ್ತು. ಈ ಬಗ್ಗೆ ಎಲ್ಲಿಯೂ ಪ್ರಸ್ತಾಪವಿಲ್ಲ. ಲ್ಯಾಂಡ್ ಬ್ಯಾಂಕ್ ಗಳ ಸುಸ್ತಿ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದ್ದರು ಅದನ್ನೂ ಪ್ರಸ್ತಾಪಿಸಿಲ್ಲ. ಇವರು ರೈತರ ಪರನಾ ವಿರೋಧಿನಾ.? ಇದು ರೈತ ವಿರೋಧಿ ಬಜೆಟ್.
ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತ ಹೇಳುತ್ತಿದ್ದಾರೆರೆ. ಆದರೆ ಅಲ್ಪ ಸಂಖ್ಯಾತರಿಗೆ ಯಾವುದೇ ಯೋಜನೆ ಮಾಡಿಲ್ಲ. ಹಿಂದುಳಿದವರು, ಪರಿಶಿಷ್ಟರಿಗೆ ಯಾವುದೆ ವಿಶೇಷ ಯೋಜನೆ ಘೊಷಣೆ ಇಲ್ಲ ಎಂದು ಟೀಕಿಸಿದರು.
ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿದ್ದರು. ನಾವು ಇಟ್ಟಷ್ಟೇ ಹಣ ಇಟ್ಟಿದ್ದಾರೆ. ಎಲ್ಲ ಪಕ್ಷದವರು ಸೇರಿ 2500 ಕೋಟಿ ನೀಡುವಂತೆ ಮನವಿ ಮಾಡಿದ್ದರು. 371ಜೆ ಗೆ ಬಿಜೆಪಿಯವರು ವಿರೋಧ ಮಾಡಿದ್ದರು. ಬಿಜೆಪಿಯವರು ಕಲ್ಯಾಣ ಕರ್ನಾಟಕ ಘೋಷಣೆ ಮಾಡಿ ಅಭಿವೃದ್ಧಿ ಮಾಡುವುದಿಲ್ಲ. ಬರಿ ಡೋಂಗಿ ಘೋಷಣೆ ಮಾಡಿದ್ದಾರೆ ಎಂದು ಕುಟುಕಿದರು.
ತಾವು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿಗೆ 10 ಸಾವಿರ ಕೋಟಿ ಮೀಸಲಿಟ್ಟಿದ್ದೆ. ಇವರು 8 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಮೆಟ್ರೋ ಪೆರಿಪೆರೆಲ್ ರಿಂಗ್ ರೋಡ್ ಬಗ್ಗೆ ಪ್ರಸ್ತಾಪವಿಲ್ಲ. ಬೆಂಗಳೂರು ಚಿತ್ರಣವನ್ನು ಆರು ತಿಂಗಳಲ್ಲಿ ಬದಲಾವಣೆ ಮಾಡುವುದಾಗಿ ಸಿಎಂ ಹೇಳಿದ್ದರು. ಸಬರ್ಬನ್ ರೈಲು ಮೂರು ವರ್ಷಗಳಿಂದ ಹೇಳುತ್ತಿದ್ದಾರೆ. ಕೇಂದ್ರದವರು 1 ಕೋಟಿ ಇಟ್ಟಿದ್ದಾರೆ. ಇವರು 500 ಕೋಟಿ ಮೀಸಲಿಟ್ಟಿದ್ದಾರೆ. ಇದು ಟೇಕ್ ಆಪ್ ಆಗಲ್ಲ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.
ಸಾಮಾಜಿಕ ನ್ಯಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹೆಸರು ಬದಲಾಯಿಸಿದಷ್ಟೆ ಇವರ ಸಾಧನೆ. ಈ ಬಜೆಟ್ ಯಾವುದೇ ಮುನ್ನೋಟವಿಲ್ಲ.
ಪೆಟ್ರೋಲ್ ಡೀಸೆಲ್ ತೆರಿಗೆ ಹೆಚ್ಚಳ ಮಾಡಿದ್ದಾರೆ. ಮದ್ಯದ ಬೆಲೆ ಹೆಚ್ಚಳ ಮಾಡಿದ್ದಾರೆ. ಬಜೆಟ್ ಮೂಲಕ ಜನರಿಗೆ ದ್ರೋಹ ಮಾಡಲು ಹೊರಟಿದ್ದಾರೆ. ಕೇಂದ್ರದಲ್ಲಿ ಇವರದೇ ಸರ್ಕಾರ ಇದೆ. ರಾಮರಾಜ್ಯ ಮಾಡುವುದಾಗಿ ಹೇಳಿದ್ದರು. ಅಲ್ಲಿಂದಲೂ ಯಾವುದೇ ಹಣ ಬರುತ್ತಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.
Source : UNI
Follow us on Social media