ಬೆಂಗಳೂರು: ಆರ್ ಆರ್ ನಗರ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆ ಕಣ ನಿರ್ಣಾಯಕ ಘಟ್ಟ ತಲುಪಿದೆ. ಇನ್ನು ಮತದಾನಕ್ಕೆ ಕೇವಲ ಮೂರು ದಿನ ಬಾಕಿ ಉಳಿದಿರುವುದು.
ನಿನ್ನೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ವತಃ ಅಖಾಡಕ್ಕಿಳಿದಿದ್ದಾರೆ. ಬಿಜೆಪಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅವರು ಕೆಲವು ಮಾತುಗಳನ್ನಾಡಿದ್ದಾರೆ.
ಇಲ್ಲಿ ಸ್ಪರ್ಧೆಯೇ ಇಲ್ಲ, ಎರಡೂ ಕ್ಷೇತ್ರಗಳಲ್ಲಿ ನಾವು ಬಹುದೊಡ್ಡ ಮತಗಳ ಅಂತರದಿಂದ ಗೆಲ್ಲಲಿದ್ದೇವೆ. ತಾವು ಪ್ರಚಾರಕ್ಕೆ ಹೋದಲ್ಲೆಲ್ಲ ಬಿಜೆಪಿ ಪರ ಅಲೆ ಕಂಡುಬಂದಿದೆ ಎಂದರು.
ಶಿರಾ ಕ್ಷೇತ್ರದಲ್ಲಿ ಬಿಜೆಪಿ ಇದುವರೆಗೆ ಗೆದ್ದೇ ಇಲ್ಲ, ಒಕ್ಕಲಿಗ ಪ್ರಾಬಲ್ಯವಿರುವ ಇಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿಯೂ ಇರಲಿಲ್ಲ. ಜೆಡಿಎಸ್ ನ ಬಿ ಸತ್ಯನಾರಾಯಣ ತಮ್ಮ ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಟಿ ಬಿ ಜಯಚಂದ್ರ ವಿರುದ್ಧ 10 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು.
ಈ ಬಾರಿ ಕಣದಲ್ಲಿ ಬಿಜೆಪಿಯಿಂದ ರಾಜೇಶ್ ಗೌಡ, ಜೆಡಿಎಸ್ ನಿಂದ ದಿವಂಗತ ಶಾಸಕ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ, ಕಾಂಗ್ರೆಸ್ ನಿಂದ ಟಿ ಬಿ ಜಯಚಂದ್ರ ಕಣದಲ್ಲಿದ್ದಾರೆ. ಶಿರಾದಲ್ಲಿ ಗೆಲ್ಲುವ ಮೂಲಕ ಬಿಜೆಪಿ ಎಲ್ಲಿ ನಿಂತರೂ ಗೆಲ್ಲಬಹುದು ಎಂಬುದನ್ನು ತೋರಿಸಿಕೊಡಲಿದೆ. ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದುಬಂದರೆ ದೀರ್ಘಕಾಲದಿಂದ ಬೇಡಿಕೆಯಲ್ಲಿರುವ ಮದಲೂರು ಟ್ಯಾಂಕ್ ಗೆ ಹೇಮಾವತಿ ನದಿ ನೀರನ್ನು ಒದಗಿಸುತ್ತೇವೆ ಎಂದು ಸಿಎಂ ನಿನ್ನೆ ಭರವಸೆ ನೀಡಿದ್ದಾರೆ.
ಸಿಎಂ ಅವರು ನೀಡಿರುವ ಭರವಸೆ ಖಂಡಿತಾ ಉಪ ಚುನಾವಣೆಯಲ್ಲಿ ದೊಡ್ಡ ಪರಿಣಾಮ ಬೀರಲಿದೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ರವಿ ಕುಮಾರ್ ಹೇಳುತ್ತಾರೆ.
ಜಾತಿ ಸಮೀಕರಣವನ್ನು ಸೂಕ್ಷ್ಮವಾಗಿ ಬಿಜೆಪಿ ಲೆಕ್ಕಹಾಕುತ್ತಿದೆ. ಅದರೊಟ್ಟಿಗೆ ಕ್ಷೇತ್ರಕ್ಕೆ ಅಭಿವೃದ್ಧಿಯ ಅಜೆಂಡಾವನ್ನು ಸಹ ನೋಡುತ್ತಿದೆ. ಕುಡಿಯುವ ನೀರು, ಉತ್ತಮ ರಸ್ತೆ, ಗುಡಿಸಲು ಮುಕ್ತ ಕ್ಷೇತ್ರ ಮಾಡಬೇಕೆಂದು ಸಹ ನಿರ್ಧಾರ ಮಾಡಿದೆ ಎಂದರು.
ಇಂದು ಯಡಿಯೂರಪ್ಪನವರು ಆರ್ ಆರ್ ನಗರ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.




 
  
  
  
  
  
 